ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿಯಾಗಿದೆ. ಈ ದಿನಾಂಕ ನಿಗದಿಯ ಬೆನ್ನಲ್ಲೇ ಟೀಮ್ ಇಂಡಿಯಾದ ಪಂದ್ಯಗಳ ಕರಡು ವೇಳಾಪಟ್ಟಿ ಕೂಡ ಹೊರಬಿದ್ದಿದೆ. ಈ ವೇಳಾಪಟ್ಟಿಯಂತೆ ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ. ಅದರಂತೆ ಟೀಮ್ ಇಂಡಿಯಾದ ಕರಡು ವೇಳಾಪಟ್ಟಿ ಈ ಕೆಳಗಿನಂತಿದೆ…
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯು ಪಾಕಿಸ್ತಾನದಲ್ಲಿ ನಡೆಯಲಿದೆ. ಅಲ್ಲದೆ ಈ ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮೂರು ಸ್ಟೇಡಿಯಂಗಳನ್ನು ಫೈನಲ್ ಮಾಡಿದ್ದು, ಅದರಂತೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದೆ.
ಇಲ್ಲಿ ಟೀಮ್ ಇಂಡಿಯಾ ಪಂದ್ಯಗಳಿಗೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲಿ ಆಡಲಿದೆ ಎಂದು ವರದಿಯಾಗಿದೆ.
ಲಾಹೋರ್ ನಗರವು ಭಾರತದ ಗಡಿಗೆ ಸಮೀಪದಲ್ಲಿದೆ. ಇದರಿಂದ ಭಾರತೀಯ ಅಭಿಮಾನಿಗಳ ಪ್ರಯಾಣಕ್ಕೂ ಅನುಕೂಲವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಫ್ಯಾನ್ಸ್ಗಳಿಗೆ ಅನುಕೂಲ ಕಲ್ಪಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಂದೇ ಸ್ಟೇಡಿಯಂನಲ್ಲಿ ಭಾರತ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದೆ.
ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಬಿಸಿಸಿಐ ನಿರಾಕರಿಸಿದೆ. ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕರಡು ವೇಳಾಪಟ್ಟಿಯೊಂದಿಗೆ ಭಾರತದ ಪಂದ್ಯಗಳಿಗೆ ಸ್ಥಳ ನಿಗದಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಇತ್ತ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡರೆ ಮಾತ್ರ ಭಾರತ ತಂಡ ಪಾಲ್ಗೊಳ್ಳಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದಾಗ್ಯೂ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವುದಿಲ್ಲ ಎಂದು ತಿಳಿಸಿದೆ. ಇದೀಗ ಪಾಕ್ ಕ್ರಿಕೆಟ್ ಮಂಡಳಿಯೊಂದಿಗೆ ಐಸಿಸಿ ಚರ್ಚೆಯಲ್ಲಿದ್ದು, ಈ ಮೂಲಕ ಪಿಸಿಬಿ ಮನವೊಲಿಸಲು ಮುಂದಾಗಿದೆ.
Published On - 8:03 am, Thu, 21 November 24