ಚಾಂಪಿಯನ್ಸ್ ಟ್ರೋಫಿ ಆಯೋಜಕತ್ವಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ವಿವಾದ ಅಂತ್ಯಗೊಂಡಿದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವ ಒಮ್ಮತಕ್ಕೆ ಬರಲಾಗಿದೆ. ಐಸಿಸಿ ಕೂಡ ಇದನ್ನು ಪ್ರಕಟಿಸಿದೆ ಆದರೆ ಇದರ ಹೊರತಾಗಿಯೂ ಪಂದ್ಯಾವಳಿಯ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಇದಕ್ಕೆ ಕಾರಣ ಟೀಂ ಇಂಡಿಯಾದ ಪಂದ್ಯಗಳನ್ನು ಎಲ್ಲಿ ಆಯೋಜಿಸಬೇಕು ಎಂಬುದು. ಇದೀಗ ಈ ಹಗ್ಗಜಗ್ಗಾಟವೂ ಮುಗಿದಿದ್ದು, ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ನಿರ್ಧಾರವಾಗಿದೆ. ವರದಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಟೀಂ ಇಂಡಿಯಾ ದುಬೈನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
ಚಾಂಪಿಯನ್ಸ್ ಟ್ರೋಫಿಗೆ ಹೈಬ್ರಿಡ್ ಮಾದರಿಯನ್ನು ಬಿಸಿಸಿಐ ಬೇಡಿಕೆ ಇಟ್ಟಾಗಿನಿಂದ ದುಬೈ ಹೆಸರು ಮುಂಚೂಣಿಯಲ್ಲಿತ್ತು. ಯುಎಇಯ ಈ ನಗರವನ್ನು ಬಿಸಿಸಿಐನ ಮೊದಲ ಆಯ್ಕೆ ಎಂದು ಹೇಳಲಾಗುತ್ತಿದೆ. ಆದರೆ, ಆ ಸಮಯದಲ್ಲಿ ಪಾಕಿಸ್ತಾನಿ ಮಂಡಳಿಯು ಹೈಬ್ರಿಡ್ ಮಾದರಿಗೆ ಸಿದ್ಧವಾಗಿರಲಿಲ್ಲ. ಆದರೆ ಹಲವು ವಾರಗಳ ಚರ್ಚೆ ಮತ್ತು ರಾಜಿ ಪ್ರಯತ್ನಗಳ ನಂತರ ಅಂತಿಮವಾಗಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಒಪ್ಪಂದಕ್ಕೆ ಬರಲಾಯಿತು. ಆದಾಗ್ಯೂ, ಟೀಂ ಇಂಡಿಯಾದ ಪಂದ್ಯಗಳನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಆಯೋಜಿಸಲು ಪಿಸಿಬಿ ಮುಂದಾಗಿದೆ ಎಂದು ವರದಿಗಳಲ್ಲಿ ಹೇಳಲಾಗುತ್ತಿತ್ತು.
ಇದೀಗ ಈ ಸಂದಿಗ್ಧತೆಯೂ ಬಗೆಹರಿದಿದ್ದು, ಪಿಸಿಬಿ ಕೂಡ ದುಬೈನಲ್ಲಿ ಟೀಂ ಇಂಡಿಯಾದ ಪಂದ್ಯಗಳನ್ನು ಆಡಿಸಲು ಒಪ್ಪಿಗೆ ನೀಡಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಪಿಸಿಬಿ ಪಂದ್ಯಾವಳಿಯನ್ನು ಆಯೋಜಿಸಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ದುಬೈ ಅನ್ನು ತಟಸ್ಥ ಸ್ಥಳವನ್ನಾಗಿ ಮಾಡಲು ನಿರ್ಧರಿಸಿದೆ. ಎಮಿರೇಟ್ಸ್ ಮಂಡಳಿಯ ಮುಖ್ಯಸ್ಥ ಶೇಖ್ ನಹ್ಯಾನ್ ಅಲ್ ಮುಬಾರಕ್ ಅವರೊಂದಿಗೆ ಚರ್ಚಿಸಿದ ನಂತರ ಪಾಕಿಸ್ತಾನಿ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಇದನ್ನು ಅನುಮೋದಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೆಲವು ವಾರಗಳ ಹಿಂದೆಯೂ ನಖ್ವಿ ದುಬೈನಲ್ಲಿ ಎಮಿರೇಟ್ಸ್ ಬೋರ್ಡ್ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಕರಡು ವೇಳಾಪಟ್ಟಿಯ ಪ್ರಕಾರ 8 ತಂಡಗಳ ಈ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಒಂದೇ ಗುಂಪಿನಲ್ಲಿದೆ. ಈ ಮೂಲಕ ಭಾರತ ತಂಡ ಈ ಮೂರು ತಂಡಗಳ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಅದೇ ವೇಳೆ ಟೀಂ ಇಂಡಿಯಾ ನಾಕೌಟ್ ಸುತ್ತಿಗೆ ತಲುಪಿದರೆ, ಟೂರ್ನಿಯ ಸೆಮಿಫೈನಲ್ ಪಂದ್ಯವೂ ದುಬೈನಲ್ಲಿ ನಡೆಯಲಿದೆ. ಅದೇ ರೀತಿ ಫೈನಲ್‌ಗೆ ತಲುಪಿದರೆ ಪ್ರಶಸ್ತಿ ಸುತ್ತಿನ ಪಂದ್ಯವೂ ಇದೇ ನಗರದಲ್ಲಿ ನಡೆಯಲಿದೆ. ಒಂದು ವೇಳೆ ಟೀಂ ಇಂಡಿಯಾ ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾದರೆ ಪಾಕಿಸ್ತಾನದ ಲಾಹೋರ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Sun, 22 December 24