23 ವರ್ಷಗಳ ಹಿಂದೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಮಧ್ಯ ಪ್ರದೇಶ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮಧ್ಯ ಪ್ರದೇಶ ತಂಡವನ್ನು 96 ರನ್ಗಳಿಂದ ಮಣಿಸಿ ಕರ್ನಾಟಕ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಂದು ತಂಡ ಸೋಲುತ್ತಿದ್ದಂತೆ ಪೆವಿಲಿಯನ್ನಲ್ಲಿದ್ದ ಮಧ್ಯ ಪ್ರದೇಶ ತಂಡದ ನಾಯಕ ತಲೆ ಮೇಲೆ ಕೈಯಿಟ್ಟು ಒಂದಷ್ಟು ಹೊತ್ತು ಹಾಗೆಯೇ ಕೂತಿದ್ದರು. ಏಕೆಂದರೆ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಸೋಲಿನೊಂದಿಗೆ ಮಧ್ಯ ಪ್ರದೇಶ ತಂಡವು ಕೈತಪ್ಪಿಸಿಕೊಂಡಿತು. ಇದಾಗಿ 23 ವರ್ಷಗಳ ಬಳಿಕ, ಅಂದರೆ 2022 ರ ರಣಜಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶೇಷ ಎಂದರೆ ಅಂದು ತಲೆ ಮೇಲೆ ಕೈಯನ್ನಿಟ್ಟು ನೋವಿನಲ್ಲೇ ಕೂತಿದ್ದ ಮಧ್ಯ ಪ್ರದೇಶ ತಂಡದ ನಾಯಕ ಈ ಬಾರಿ ನಗುತ್ತಾ ನಿಂತಿದ್ದರು. ಆ ನಗುವು 23 ವರ್ಷಗಳ ಹಿಂದಿನ ನೋವನನ್ನು ಮರೆಸುವಂತಿತ್ತು.
ಹೌದು, 1999 ರಲ್ಲಿ ಮಧ್ಯ ಪ್ರದೇಶ ತಂಡದ ನಾಯಕರಾಗಿದ್ದ ಚಂದ್ರಕಾಂತ್ ಪಂಡಿತ್ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡದ ಕೋಚ್. 23 ವರ್ಷಗಳ ಹಿಂದಿನ ಕನಸನ್ನು ಇದೀಗ ತರಬೇತುದಾರನಾಗಿ ಚಂದ್ರಕಾಂತ್ ಪಂಡಿತ್ ಸಾಧಿಸಿ ತೋರಿಸಿದ್ದಾರೆ. ಅದರಂತೆ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಿ ಮಧ್ಯ ಪ್ರದೇಶ ತಂಡವು ಚೊಚ್ಚಲ ಬಾರಿಗೆ ರಣಜಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಚಂದ್ರಕಾಂತ್ ಪಂಡಿತ್ ಬಹಳ ಹೆಸರು ಮಾಡಿದ್ದರು. ಅದರಲ್ಲೂ ಬಲಿಷ್ಠ ತಂಡವೊಂದನ್ನು ರೂಪಿಸುವಲ್ಲಿ ಚಾಣಕ್ಯರು ಎಂಬ ಮಾತಿದೆ. ಇದಕ್ಕೆ ಸಣ್ಣ ಸಾಕ್ಷಿಯೇ 1999 ರಲ್ಲಿ ಮಧ್ಯ ಪ್ರದೇಶ ತಂಡವು ಫೈನಲ್ಗೆ ತಲುಪಿರುವುದು. ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 138 ಪಂದ್ಯಗಳಲ್ಲಿ 22 ಶತಕ ಮತ್ತು 42 ಅರ್ಧ ಶತಕಗಳ ನೆರವಿನಿಂದ 8 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಪಂಡಿತ್ ಅವರು ಟೀಮ್ ಇಂಡಿಯಾ ಪರ 5 ಟೆಸ್ಟ್ ಮತ್ತು 36 ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ.
ನಿವೃತ್ತಿ ಬಳಿಕ ತರಬೇತುದಾರರಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದ ಚಂದ್ರಕಾಂತ್ ಪಂಡಿತ್ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿತ್ತು. ಅದರಂತೆ 3 ವರ್ಷಗಳಲ್ಲಿ ವಿದರ್ಭ ತಂಡವನ್ನು ಸತತ 2 ಬಾರಿ (2017-18 ಮತ್ತು 2018-19) ರಣಜಿ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಲ್ಲದೆ ಎರಡು ವರ್ಷಗಳ ಹಿಂದೆ ಪಂಡಿತ್ ಅವರ ಮೇಲ್ವಿಚಾರಣೆಯಲ್ಲಿ ಮುಂಬೈ ತಂಡ ಕೂಡ ರಣಜಿ ಟ್ರೋಫಿಯನ್ನೂ ಗೆದ್ದುಕೊಂಡಿತು. ಅಂದರೆ 6 ವರ್ಷಗಳೊಳಗೆ ಚಂದ್ರಕಾಂತ್ ಪಂಡಿತ್ ಅವರ ಕೋಚಿಂಗ್ನಲ್ಲಿ ಪಳಗಿದ ತಂಡವು 3 ಬಾರಿ ರಣಜಿ ಟ್ರೋಫಿ ಗೆದ್ದಿದೆ.
ಚಂದ್ರಕಾಂತ್ ಪಂಡಿತ್ ಅವರನ್ನು ಕಟ್ಟುನಿಟ್ಟಿನ ಕೋಚ್ ಎಂದು ಪರಿಗಣಿಸಲಾಗುತ್ತದೆ. ನಾಯಕ ಅಥವಾ ಯಾವುದೇ ಆಟಗಾರ ತಂಡಕ್ಕಾಗಿ ಸಿದ್ಧಪಡಿಸುವ ತಂತ್ರದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುವುದಿಲ್ಲ. ಶಿಸ್ತು ಅವರ ತರಬೇತಿಯ ಪ್ರಮುಖ ಭಾಗವಾಗಿದೆ. ಪಂಡಿತ್ ವಿದರ್ಭ ತಂಡದ ಕೋಚ್ ಆಗಿದ್ದಾಗ, ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ವಿದರ್ಭ ಆಟಗಾರರು ಫೋನ್ ಬಳಸುತ್ತಿದ್ದರು. ಇದನ್ನು ಗಮನಿಸಿದ್ದ ಪಂಡಿತ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ್ದರು ಎಂಬ ಸುದ್ದಿಗಳು ಚರ್ಚೆಗೀಡಾಗಿತ್ತು. ಏಕೆಂದರೆ ಚಂದ್ರಕಾಂತ್ ಪಂಡಿತ್ ಅಂತಹದೊಂದು ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿದ್ದರು. ಪಂದ್ಯವಾಡುವಾಗ ಅದರತ್ತ ಮಾತ್ರ ಆಟಗಾರರ ಗಮನ ಇರಬೇಕೆಂದು ಬಯಸುತ್ತಿದ್ದರು. ಹೀಗಾಗಿಯೇ ಕಳೆದ 6 ವರ್ಷಗಳಲ್ಲಿ ಅವರ ಕೋಚಿಂಗ್ನಲ್ಲಿ 3 ರಣಜಿ ಟ್ರೋಫಿ ಒಲಿದಿದೆ ಎಂದರೆ ತಪ್ಪಾಗಲಾರದು.
ಇದಾಗ್ಯೂ ಈ ಬಾರಿ ಮಧ್ಯ ಪ್ರದೇಶವನ್ನು ಯಾರು ಕೂಡ ಬಲಿಷ್ಠ ತಂಡವಾಗಿ ಪರಿಗಣಿಸಿರಲಿಲ್ಲ. ಏಕೆಂದರೆ ತಂಡದ ಪ್ರಮುಖ ವೇಗಿ ಅವೇಶ್ ಖಾನ್ ಹಾಗೂ ಸ್ಪೋಟಕ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರು. ಇನ್ನು ಪ್ರಮುಖ ಆಟಗಾರ ಈಶ್ವರ್ ಪಾಂಡೆ ಮತ್ತು ಕುಲದೀಪ್ ಸೇನ್ ಕೂಡ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದರು. ಇತ್ತ ಸ್ಟಾರ್ ಆಟಗಾರರ ಅಲಭ್ಯತೆಯಿಂದಾಗಿ ಮಧ್ಯ ಪ್ರದೇಶ ತಂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಚಂದ್ರಕಾಂತ್ ಪಂಡಿತ್ ಅವರ ಸಾಮರ್ಥ್ಯ ಗೊತ್ತಿದ್ದವರಿಗೆ ಈ ಬಾರಿ ಕೂಡ ಬಲಿಷ್ಠ ತಂಡ ರೂಪಿಸುವ ನಿರೀಕ್ಷೆಯಿತ್ತು. ಅದರಂತೆ ಯುವ ಪಡೆಯನ್ನೇ ಸಜ್ಜುಗೊಳಿಸಿದ್ದರು. ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಮಧ್ಯ ಪ್ರದೇಶ ತಂಡವು ಫೈನಲ್ ಪ್ರವೇಶಿಸಿತು. ಅಂತಿಮ 41 ಬಾರಿ ರಣಜಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಲು ಚಂದ್ರಕಾಂತ್ ಪಂಡಿತ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಅದರ ಒಂದು ಝಲಕ್ ಅಷ್ಟೇ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ.
ಯಾವಾಗ ಮಧ್ಯ ಪ್ರದೇಶ ಮೊದಲ ಇನಿಂಗ್ಸ್ನಲ್ಲಿ 536 ರನ್ ಕಲೆಹಾಕಿತೋ, ಮುಂಬೈ ತಂಡವು ಅಲ್ಲೇ ಅರ್ಧ ಪಂದ್ಯವನ್ನು ಸೋತಿದ್ದರು. ಏಕೆಂದರೆ ಮಧ್ಯ ಪ್ರದೇಶವು ಐದನೇ ದಿನದಾಟದಲ್ಲಿ ಫಲಿತಾಂಶ ಮೂಡಿಬರುವಂತಹ ತಂತ್ರವನ್ನು ರೂಪಿಸಿದ್ದರು. ಏಕೆಂದರೆ ಮುಂಬೈ ತಂಡವು ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದು, ಹೀಗಾಗಿ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿದರೆ, ಪಂದ್ಯ ಡ್ರಾ ಆದರೂ ಮಧ್ಯ ಪ್ರದೇಶ ತಂಡವು ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವುದು ಖಚಿತವಾಗಿತ್ತು.
ಇಂತಹದೊಂದು ಮಾಸ್ಟರ್ ಪ್ಲ್ಯಾನ್ನೊಂದಿಗೆ ಕಣಕ್ಕಿಳಿದ ಮಧ್ಯ ಪ್ರದೇಶ ತಂಡವು ಇದೀಗ 6 ವಿಕೆಟ್ಗಳಿಂದ ಮುಂಬೈ ತಂಡವನ್ನು ಮಣಿಸಿ ದೇಶೀಯ ಕ್ರಿಕೆಟ್ ಅಂಗಳದ ಚಾಂಪಿಯನ್ ಎನಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಯ ಹಿಂದಿರುವ ಮಾಸ್ಟರ್ ಮೈಂಡ್ 1999 ರಲ್ಲಿ ರಣಜಿ ಟ್ರೋಫಿ ಫೈನಲ್ನಲ್ಲಿ ಸೋತಿದ್ದ ಮಧ್ಯ ಪ್ರದೇಶ ತಂಡದ ನಾಯಕ, ಈಗಿನ ಕೋಚ್ ಚಂದ್ರಕಾಂತ್ ಪಂಡಿತ್ ಎಂಬುದೇ ಇಲ್ಲಿ ವಿಶೇಷ.