ಕ್ರಿಕೆಟ್​ ಕೆರಿಯರ್​ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ

Cheteshwar Pujara Retirement: ಚೇತೇಶ್ವರ ಪೂಜಾರ 20 ವರ್ಷಗಳಲ್ಲಿ 278 ಪ್ರಥಮ ದರ್ಜೆ ಪಂದ್ಯಗಳು, 130 ಲಿಸ್ಟ್ ಎ ಮತ್ತು 71 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ ಅವರು 66 ಶತಕಗಳೊಂದಿಗೆ 21301 ರನ್ ಗಳಿಸಿದ್ದಾರೆ. ಲಿಸ್ಟ್ ಎ ನಲ್ಲಿ ಅವರು 16 ಶತಕಗಳೊಂದಿಗೆ 5759 ರನ್ ಗಳಿಸಿದ್ದಾರೆ. ಟಿ20ಯಲ್ಲಿ ಅವರು 1 ಶತಕದೊಂದಿಗೆ 1556 ರನ್ ಗಳಿಸಿದ್ದಾರೆ.

ಕ್ರಿಕೆಟ್​ ಕೆರಿಯರ್​ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ
Cheteshwar Pujara

Updated on: Aug 24, 2025 | 12:11 PM

ಚೇತೇಶ್ವರ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. 2005 ರಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿಯುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಪೂಜಾರ ಆ ಬಳಿಕ 13 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಇದೀಗ 20 ವರ್ಷಗಳ ದೀರ್ಘಾವಧಿಯ ಕ್ರಿಕೆಟ್ ವೃತ್ತಿಜೀವನಕ್ಕೆ ಚೇತೇಶ್ವರ ಪೂಜಾರ ವಿದಾಯ ಹೇಳಿದ್ದಾರೆ.

ಟೀಮ್ ಇಂಡಿಯಾ ಪರ 13 ವರ್ಷ:

ಚೇತೇಶ್ವರ ಪೂಜಾರ 2010 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವಾಡುವ ಮೂಲಕ ಇಂಟರ್​ನ್ಯಾನಷಲ್ ಕೆರಿಯರ್ ಆರಂಭಿಸಿದ್ದರು. 2013 ರಲ್ಲಿ, ಬುಲವಾಯೊದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು.

ಆದರೆ ಏಕದಿನ ಕ್ರಿಕೆಟ್​ನಲ್ಲಿ ಪೂಜಾರ ಹೆಚ್ಚು ದಿನಗಳ ಕಾಲ ಕಾಣಿಸಿಕೊಂಡಿರಲಿಲ್ಲ. ಆದರೆ ಇತ್ತ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿ ಗುರುತಿಸಿಕೊಂಡಿದ್ದ ಪೂಜಾರ ಜೂನ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ನಿವೃತ್ತಿ ಘೋಷಣೆ:

ಚೇತೇಶ್ವರ ಪೂಜಾರ ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ಜೆರ್ಸಿ ಧರಿಸುವುದು, ಭಾರತೀಯ ರಾಷ್ಟ್ರಗೀತೆ ಹಾಡುವುದು ಮತ್ತು ನೀವು ಮೈದಾನಕ್ಕೆ ಕಾಲಿಡುವ ಪ್ರತಿ ಬಾರಿಯೂ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹ, ಇವೆಲ್ಲವನ್ನೂ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವೆಲ್ಲವೂ ನನಗೆ ಮುಖ್ಯವಾಗಿತ್ತು. ಆದರೆ, ಪ್ರತಿಯೊಂದು ಒಳ್ಳೆಯ ವಿಷಯವೂ ಕೊನೆಗೊಳ್ಳುತ್ತದೆ. ಅದರಂತೆ ಇದೀಗ ನಾನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪೂಜಾರ ಅವರ ವೃತ್ತಿಜೀವನ:

ಚೇತೇಶ್ವರ ಪೂಜಾರ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 20 ವರ್ಷಗಳಲ್ಲಿ ಅವರು 278 ಪ್ರಥಮ ದರ್ಜೆ ಪಂದ್ಯಗಳು, 130 ಲಿಸ್ಟ್ ಎ ಮತ್ತು 71 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ ಅವರು 66 ಶತಕಗಳೊಂದಿಗೆ 21301 ರನ್ ಗಳಿಸಿದ್ದಾರೆ. ಲಿಸ್ಟ್ ಎ ನಲ್ಲಿ ಅವರು 16 ಶತಕಗಳೊಂದಿಗೆ 5759 ರನ್ ಗಳಿಸಿದ್ದಾರೆ. ಟಿ20ಯಲ್ಲಿ ಅವರು 1 ಶತಕದೊಂದಿಗೆ 1556 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ವಿಶ್ವ ದಾಖಲೆಯಾಟ… 378 ರನ್​​ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್​ಕೆ

ಇನ್ನು ಟೀಮ್ ಇಂಡಿಯಾ  ಪರ 103 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ 108 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು 7200 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 19 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಭಾರತ ತಂಡದ ಗೆಲುವುಗಳಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದರು.