CPL 2024: ಕಾರ್ನ್ವಾಲ್ ಕಮಾಲ್: ರಾಯಲ್ಸ್ಗೆ ಭರ್ಜರಿ ತಂದುಕೊಟ್ಟ ರಹ್ಕೀಮ್
CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧ ಬಾರ್ಬಡೋಸ್ ರಾಯಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಆಲ್ರೌಂಡರ್ ರಹ್ಕೀಮ್ ಕಾರ್ನ್ವಾಲ್. ಅಲ್ಲದೆ ಈ ಜಯದೊಂದಿಗೆ ಬಾರ್ಬಡೋಸ್ ರಾಯಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ರಹ್ಕೀಮ್ ಕಾರ್ನ್ವಾಲ್ ಕಮಾಲ್ ಮಾಡಿದ್ದಾರೆ. ಅದು ಸಹ ಕೇವಲ 16 ರನ್ ನೀಡಿ ಐದು ವಿಕೆಟ್ಗಳನ್ನು ಉರುಳಿಸುವ ಮೂಲಕ. ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಸಿಪಿಎಲ್ನ 18ನೇ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ಮತ್ತು ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ ತಂಡದ ನಾಯಕ ರೋವ್ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ನವೀನ್ ಉಲ್ ಹಕ್ ಆರಂಭಿಕ ಆಘಾತ ನೀಡಿದ್ದರು.
ಇದಾದ ಬಳಿಕ ದಾಳಿಗಿಳಿದ ರಹ್ಕೀಮ್ ಕಾರ್ನ್ವಾಲ್ ಅವರ ಸ್ಪಿನ್ ಮೋಡಿಗೆ ಕ್ರೀಸ್ ಕಚ್ಚಿ ನಿಲ್ಲಲು ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಬ್ಯಾಟರ್ಗಳು ಪರದಾಡಿದರು. ಪರಿಣಾಮ 61 ರನ್ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇನ್ನು ಕೆಳ ಕ್ರಮಾಂಕದ ಬ್ಯಾಟರ್ಗಳಿಗೆ ಸುಲಭವಾಗಿ ಪೆವಿಲಿಯನ್ ಹಾದಿ ತೋರಿಸುವಲ್ಲಿ ರಹ್ಕೀಮ್ ಯಶಸ್ವಿಯಾದರು.
ಅದರಲ್ಲೂ ರಹ್ಕೀಮ್ ಕಾರ್ನ್ವಾಲ್ ಎಸೆತದಲ್ಲಿ ಬೌಂಡರಿ ಲೈನ್ ಬಳಿಕ ಅಲಿಕ್ ಅಥನಾಝ್ ಹಿಡಿದ ಡೈವಿಂಗ್ ಕ್ಯಾಚ್ ಅದ್ಭುತವಾಗಿತ್ತು. ಈ ವಿಕೆಟ್ನೊಂದಿಗೆ ಕಾರ್ನ್ವಾಲ್ 4 ಓವರ್ಗಳಲ್ಲಿ ಕೇವಲ 16 ರನ್ ನೀಡಿ 5 ವಿಕೆಟ್ಗಳ ಸಾಧನೆ ಮಾಡಿದರು. ಅಲ್ಲದೆ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು 19.1 ಓವರ್ಗಳಲ್ಲಿ 110 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇನ್ನು 111 ರನ್ಗಳ ಸುಲಭ ಗುರಿ ಬೆನ್ನತ್ತಿದ ಬಾರ್ಬಡೋಸ್ ರಾಯಲ್ಸ್ ತಂಡಕ್ಕೆ ಕ್ವಿಂಟನ್ ಡಿಕಾಕ್ (59) ಹಾಗೂ ಕಡೀಮ್ ಅಲ್ಗೆನೆ (25) ಉತ್ತಮ ಆರಂಭ ಒದಗಿಸಿದರು. ಈ ಮೂಲಕ 11.2 ಓವರ್ಗಳಲ್ಲಿ 113 ರನ್ ಬಾರಿಸಿ ಬಾರ್ಬಡೋಸ್ ರಾಯಲ್ಸ್ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.