ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು, ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಜೀವ ನಾಯಕತ್ವ ನಿಷೇಧಕ್ಕೊಳಗಾಗಿದ್ದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್‌ಗೆ ಕೊನೆಗೂ ಶುಭ ಸುದ್ದಿಯೊಂದು ಸಿಕ್ಕಿದೆ. ಕಳೆದ 6 ವರ್ಷದ ಹಿಂದೆ ವಾರ್ನರ್ ಮೇಲೆ ವಿಧಿಸಿದ್ದ ಆಜೀವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹಿಂಪಡೆದಿದೆ. ಕ್ರಿಕೆಟ್ ಆಸ್ಟ್ರೇಲಿಯಾ ವಿಧಿಸಿದ ಶಿಕ್ಷೆಯ ಪ್ರಕಾರ ವಾರ್ನರ್ 2018 ರಿಂದ ಆಸ್ಟ್ರೇಲಿಯಾದಲ್ಲಿ ಯಾವುದೇ ತಂಡದ ನಾಯಕತ್ವವಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಕ್ರಿಕೆಟ್ ಆಸ್ಟ್ರೇಲಿಯದ ನಡುವಳಿಕೆ ಆಯೋಗ ಈ ನಿರ್ಧಾರವನ್ನು ಪರಿಶೀಲಿಸಿದ್ದು, ವಾರ್ನರ್ ಮೇಲಿನ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿದೆ.
ವಾರ್ನರ್ ಮೇಲೆ ಹೇರಲಾಗಿದ್ದ ಆಜೀವ ನಾಯಕತ್ವದ ನಿಷೇಧವನ್ನು ಹಿಂತೆಗೆದುಕೊಳ್ಳುವುದರಿಂದ ಅವರು ಈಗ ಮತ್ತೆ ಆಸ್ಟ್ರೇಲಿಯಾದಲ್ಲಿ ಯಾವುದೇ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದಾಗಿದೆ. ಇದೀಗ ವಾರ್ನರ್ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದರಿಂದ ಮುಂದಿನ ಬಿಬಿಎಲ್‌ನಲ್ಲಿ ವಾರ್ನರ್ ಸಿಡ್ನಿ ಥಂಡರ್ಸ್ ತಂಡದ ನಾಯಕನಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ವಾಸ್ತವವಾಗಿ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಡೇವಿಡ್ ವಾರ್ನರ್ ಮೇಲೆ ಈ ನಿಷೇಧ ಹೇರಲಾಗಿತ್ತು. ವಾರ್ನರ್ ಹೊರತಾಗಿ, ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಕೂಡ ತಪ್ಪಿತಸ್ಥರೆಂದು ಸಾಬೀತಾಗಿದ್ದರಿಂದ ಅವರನ್ನು ಸಹ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು.
ವಾರ್ನರ್‌ಗೆ ನಿಷೇಧ ಹೇರಿದ ಆರು ವರ್ಷಗಳ ನಂತರ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ನಿರ್ಧಾರವನ್ನು ಹಿಂಪಡೆದಿದೆ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಕ್ಟೋಬರ್ 25ರಂದು ವಾರ್ನರ್ ಮೇಲೆ ಹೇರಲಾಗಿದ್ದ ಆಜೀವ ನಾಯಕತ್ವ ನಿಷೇಧವನ್ನು ನೀತಿ ಆಯೋಗದ 3 ಸದಸ್ಯರ ಸಮಿತಿ ಪರಿಶೀಲಿಸಿದ್ದು, ಈ ನಿಷೇಧದ ಶಿಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಜೀವಮಾನ ನಾಯಕತ್ವದ ನಿಷೇಧವನ್ನು ಮರು ಪರಿಶೀಲಿಸುವಂತೆ ಡೇವಿಡ್ ವಾರ್ನರ್ 2018ರಲ್ಲೇ ಮನವಿ ಮಾಡಿದ್ದರು. ಆದರೆ ಅದು ಯಾವುದೇ ಪ್ರಯೋಜನಕ್ಕೆ ಬಂದಿರಲಿಲ್ಲ. ಹೀಗಾಗಿ 2022 ರಲ್ಲಿ ತಮ್ಮ ಮೇಲ್ಮನವಿಯನ್ನು ಹಿಂತೆಗೆದುಕೊಂಡಿದ್ದರು. 6 ವರ್ಷಗಳ ಕಾಲ ಕಾದ ನಂತರ ಇದೀಗ ನಾಯಕತ್ವದ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ವಾರ್ನರ್ ಮೇಲಿನ ಈ ನಿಷೇಧ ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ವಾರ್ನರ್‌ಗೆ ನಿಷೇಧ ತೆರವಾದ ಖುಷಿ ಒಂದೆಡೆಯಾದರೆ, ನಿವೃತ್ತಿಯಾಗುವ ಮುನ್ನ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸುವ ಆಸೆ ಈಡೇರಿಲ್ಲ ಎಂಬ ವಿಷಾದ ಇನ್ನೊಂದೆಡೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ