IND vs NZ: ಸುಂದರ್‌ಗೆ ಹಿಂದಿಯಲ್ಲಿ ಸಲಹೆ ನೀಡಿದ ಪಂತ್; ಕಿವೀಸ್ ಬ್ಯಾಟರ್ ಮುಂದೆ ಮಾಡಿದ್ದೇನು?
IND vs NZ: ಪುಣೆಯಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರು ವಾಷಿಂಗ್ಟನ್ ಸುಂದರ್‌ಗೆ ಹಿಂದಿಯಲ್ಲಿ ನೀಡಿದ ಬೌಲಿಂಗ್ ಸಲಹೆ ವ್ಯರ್ಥವಾಯಿತು. ಕಿವೀಸ್ ಆಟಗಾರ ಅಜಾಜ್ ಪಟೇಲ್‌ಗೆ ಹಿಂದಿ ಬರುತ್ತದೆ ಎಂದು ತಿಳಿಯದೆ ನೀಡಿದ ಸಲಹೆಯಿಂದ ಸುಂದರ್ ಬೌಂಡರಿ ಬಿಟ್ಟುಕೊಡಬೇಕಾಯಿತು. ಈ ಘಟನೆಯ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಸ್ತುತ ಪುಣೆಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈಗಾಗಲೇ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಕಿವೀಸ್ ಪಡೆ 259 ರನ್ಗಳಿಗೆ ಆಲೌಟ್ ಆಗಿದೆ. ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಇನ್ನಿಂಗ್ಸ್ ಹಿನ್ನಡೆ ಅನುಭವಿಸುವ ಆತಂಕದಲ್ಲಿದೆ. ಈ ನಡುವೆ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಕಿವೀಸ್ ಆಟಗಾರನಿಗೆ ಹಿಂದೆ ಅರ್ಥವಾಗುತ್ತದೆ ಎಂಬುದನ್ನು ಅರಿಯದೆ ಮಾಡಿದ ಎಡವಟ್ಟಿಗೆ ಬೌಲರ್ ವಾಷಿಂಗ್ಟನ್ ಸುಂದರ್ ಬೌಂಡರಿ ಬಿಟ್ಟುಕೊಡಬೇಕಾಯಿತು.
ವಾಸ್ತವವಾಗಿ ಟೀಂ ಇಂಡಿಯಾ ಆಟಗಾರರು ಏಷ್ಯನ್ ರಾಷ್ಟ್ರಗಳನ್ನು ಹೊರತುಪಡಿಸಿ, ಬೇರೆ ತಂಡಗಳ ವಿರುದ್ಧ ಪಂದ್ಯಗಳನ್ನಾಡುವ ವೇಳೆ ಮೈದಾನದಲ್ಲಿ ಹೆಚ್ಚಾಗಿ ಹಿಂದಿಯಲ್ಲಿ ಮಾತನಾಡುತ್ತಾರೆ. ಏಕೆಂದರೆ ಏಷ್ಯನ್ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ದೇಶಗಳ ತಂಡಗಳಿಗೆ ಹಿಂದೆ ಅಷ್ಟಾಗಿ ಅರ್ಥವಾಗುವುದಿಲ್ಲ. ಇದರ ಲಾಭವನ್ನು ಟೀಂ ಇಂಡಿಯಾ ಆಟಗಾರರು ಈ ಹಿಂದೆ ಸಾಕಷ್ಟು ಭಾರಿ ಪಡೆದಿದ್ದಾರೆ. ಅದೇ ರೀತಿ ಪುಣೆ ಟೆಸ್ಟ್ ಪಂದ್ಯದಲ್ಲೂ ವಿಕೆಟ್‌ಕೀಪರ್ ರಿಷಬ್ ಪಂತ್, ಬೌಲಿಂಗ್ ಮಾಡುತ್ತಿದ್ದ ವಾಷಿಂಗ್ಟನ್ ಸುಂದರ್‌ಗೆ ಕಿವೀಸ್ ಬ್ಯಾಟರ್ ಎದುರು ಯಾವ ರೀತಿಯಾಗಿ ಬೌಲ್ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಆದರೆ ಪಂತ್ ನೀಡಿದ ಸಲಹೆಯೇ ಟೀಂ ಇಂಡಿಯಾ ಪಾಲಿಗೆ ಮುಳುವಾಗಿದೆ.
ಮೊದಲ ದಿನದಾಟದಲ್ಲಿ ಕಿವೀಸ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದ ವಾಷಿಂಗ್ಟನ್ ಸುಂದರ್ 7 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಸೌಥಿ ವಿಕೆಟ್ ಪತನವಾದ ಬಳಿಕ ಕ್ರೀಸ್ಗೆ ಬಂದ ಅಜಾಜ್ ಪಟೇಲ್ರನ್ನು ಔಟ್ ಮಾಡುವ ಸಲುವಾಗಿ ಸುಂದರ್ ದಾಳಿಗಿಳಿದರು. ಈ ವೇಳೆ ಸುಂದರ್‌ಗೆ ಹಿಂದಿಯಲ್ಲಿ ಸಲಹೆ ನೀಡಿದ ಪಂತ್, ‘ವಶೀ ನೀನು ಫುಲರ್ ಲೆಂಗ್ತ್ ಬಾಲನ್ನು ವಿಕೆಟ್ನಿಂದ ಹೊರಗೆ ಬೌಲ್ ಮಾಡಬಹುದು ಎಂಬ ಸಲಹೆ ನೀಡಿದರು. ಪಂತ್ ಸಲಹೆ ಮೇರೆಗೆ ಅದೇ ರೀತಿಯಾಗಿ ಬೌಲ್ ಮಾಡಿದ ಸುಂದರ್ ಎಸೆತವನ್ನು ಅಜಾಜ್ ಪಟೇಲ್ ಬೌಂಡರಿಗಟ್ಟಿದರು.
ಆ ಬಳಿಕ ಪಂತ್ಗೆ ತಿಳಿ ಹೇಳಿದ ಟೀಂ ಇಂಡಿಯಾ ಆಟಗಾರರು ಅಜಾಜ್ ಪಟೇಲ್‌ಗೆ ಹಿಂದಿ ಬರುತ್ತದೆ ಎಂಬುದನ್ನು ಮನವರಿಕೆ ಮಾಡಿದರು. ಇದನ್ನು ಕೇಳಿದ ಪಂತ್, ಅಜಾಜ್ ಪಟೇಲ್‌ಗೆ ಹಿಂದಿ ಗೊತ್ತು ಅನ್ನೊದು ನನಗೆ ಹೇಗೆ ತಿಳಿಯಬೇಕು ಎಂದಿದ್ದಾರೆ. ಟೀಂ ಇಂಡಿಯಾ ಆಟಗಾರರ ಈ ಪೂರ್ಣ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ