IND vs NZ: 9 ಬಾರಿ ಔಟ್..! ಎಡಗೈ ಸ್ಪಿನ್ನರ್ಗಳೆಂದರೆ ಕೊಹ್ಲಿಗ್ಯಾಕೆ ಇಷ್ಟೊಂದು ಭಯ
Virat Kohli: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಎಡಗೈ ಸ್ಪಿನ್ನರ್‌ಗಳ ವಿರುದ್ಧದ ದೌರ್ಬಲ್ಯವನ್ನು ಮತ್ತೊಮ್ಮೆ ತೋರಿಸಿದೆ. ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು, ಇದು ಅವರ ಎಡಗೈ ಸ್ಪಿನ್ನರ್‌ಗಳ ವಿರುದ್ಧದ ಹಳೆಯ ಸಮಸ್ಯೆಯನ್ನು ಬಹಿರಂಗಪಡಿಸಿತು. ಕಳೆದ ಕೆಲವು ವರ್ಷಗಳಲ್ಲಿ ಈ ದೌರ್ಬಲ್ಯ ಹೆಚ್ಚಾಗಿದೆ, ಇದರಿಂದಾಗಿ ಎದುರಾಳಿ ತಂಡಗಳು ಲಾಭ ಪಡೆಯುತ್ತಿವೆ. ಟೀಂ ಇಂಡಿಯಾದ ಬ್ಯಾಟಿಂಗ್ ಕೂಡ ನಿರಾಶಾದಾಯಕವಾಗಿದೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಏನು ಆಗಬಾರದು ಎಂದುಕೊಂಡಿದ್ದರೋ ಅದೇ ನಡೆಯುತ್ತಿದೆ. ಸ್ಪಿನ್ ಸ್ನೇಹಿ ಪಿಚ್ನಲ್ಲಿ ಪೆವಿಲಿಯನ್ ಪರೇಡ್ ಮಾಡುವುದನ್ನು ಮುಂದುವರೆಸಿರುವ ಟೀಂ ಇಂಡಿಯಾ ಪುಣೆ ಟೆಸ್ಟ್ನಲ್ಲೂ ಅದೇ ದೌರ್ಬಲ್ಯಕ್ಕೆ ಬಲಿಯಾಗಿದೆ. ಕಿವೀಸ್ ತಂಡವನ್ನು 259 ರನ್ಗಳಿಗೆ ಆಲೌಟ್ ಮಾಡಿದ್ದ ರೋಹಿತ್ ಪಡೆ ಶತಕ ಪೂರೈಸುವುದಕ್ಕೂ ತಿಣುಕಾಡುತ್ತಿದೆ. ತಂಡದ ಭರವಸೆ ಬ್ಯಾಟರ್ಗಳೆಲ್ಲ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅದರಲ್ಲೂ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾಗಬೇಕಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 1 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್‌ಗಳ ವಿರುದ್ಧದ ತನ್ನ ದೌರ್ಬಲ್ಯವನ್ನು ಈ ಪಂದ್ಯದಲ್ಲೂ ಬಹಿರಂಗಪಡಿಸಿದ ಕೊಹ್ಲಿ, ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 9 ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ಗೆ ಬಲಿಯಾದರು. ಸ್ಯಾಂಟ್ನರ್ ಎಸೆತವನ್ನು ಲಾಂಗ್ ಆನ್ ಕಡೆಗೆ ಹೊಡೆಯುವ ಯತ್ನದಲ್ಲಿ ಕೊಹ್ಲಿ ಬೌಲ್ಡ್ ಆದರು. ಇದರೊಂದಿಗೆ ಮತ್ತೆ ತನ್ನ ಹಳೆಯ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿದರು. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಲ್ಲಿ ಎಡಗೈ ಸ್ಪಿನ್ ವಿರುದ್ಧ ವಿರಾಟ್ ಅವರ ದಾಖಲೆ ತುಂಬಾ ಕೆಟ್ಟದಾಗಿದೆ. ಎದುರಾಳಿ ತಂಡಗಳು ಕೊಹ್ಲಿಯ ಈ ದೌರ್ಬಲ್ಯದ ಲಾಭ ಪಡೆಯುತ್ತಿವೆ. ಇದಕ್ಕೂ ಮುನ್ನ ಕಾನ್ಪುರ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ ಎಸೆತದಲ್ಲಿ ಕೊಹ್ಲಿ ಔಟಾಗಿದ್ದರು.
ಎಡಗೈ ಸ್ಪಿನ್ನರ್‌ಗಳ ವಿರುದ್ಧ ವಿರಾಟ್ ಕೊಹ್ಲಿ ಬಹಳ ಸಮಯದಿಂದ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಿಚೆಲ್ ಸ್ಯಾಂಟ್ನರ್, ಶಕಿಬ್ ಅಲ್ ಹಸನ್ ಮತ್ತು ದುನಿತ್ ವೆಲಾಲಗೆ ಅವರಂತಹ ಬೌಲರ್‌ಗಳು ಕೊಹ್ಲಿಯನ್ನು ಸುಲಭವಾಗಿ ತನ್ನ ಖೆಡ್ಡಕ್ಕೆ ಕೆಡುವುತ್ತಿದ್ದಾರೆ. ಈ ಹಿಂದಿನ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಕೊಹ್ಲಿ, ವೆಲಾಲೆಗೆ ಬಲಿಯಾಗಿದ್ದರು. ಇನ್ನು 2021 ರಿಂದ ಕೊಹ್ಲಿ ಆಡಿರುವ ಟೆಸ್ಟ್ ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ ಎಡಗೈ ಸ್ಪಿನ್ನರ್ಗಳನ್ನು ಎದುರಿಸಿದ್ದು, ಈ ವೇಳೆ ಕೇವಲ 28.78 ಸರಾಸರಿಯಲ್ಲಿ 259 ರನ್ ಗಳಿಸಿದ್ದರೆ, 9 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Fri, 25 October 24