ಪೃಥ್ವಿ ಶಾ-ಸಪ್ನಾ ಗಿಲ್ ಸೆಲ್ಫಿ ವಿವಾದ; ಅಂದು ನಡೆದಿದ್ದೇನು, ಯಾರದ್ದು ತಪ್ಪು? ಘಟನೆಯ ವಿಡಿಯೋ ವೈರಲ್

|

Updated on: Jun 30, 2023 | 9:25 AM

Prithvi Shaw-Sapna Gill case: ಪೃಥ್ವಿ ವಿರುದ್ಧ ಸಪ್ನಾ ಗಿಲ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಮುಂಬೈ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಆ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಪೃಥ್ವಿ ಶಾ-ಸಪ್ನಾ ಗಿಲ್ ಸೆಲ್ಫಿ ವಿವಾದ; ಅಂದು ನಡೆದಿದ್ದೇನು, ಯಾರದ್ದು ತಪ್ಪು? ಘಟನೆಯ ವಿಡಿಯೋ ವೈರಲ್
ಪೃಥ್ವಿ ಶಾ- ಸಪ್ನಾ ಗಿಲ್
Follow us on

ಟೀಂ ಇಂಡಿಯಾ (Team India ಕ್ರಿಕೆಟಿಗ ಪೃಥ್ವಿ ಶಾ ಮತ್ತು ನಟಿ ಸಪ್ನಾ ಗಿಲ್ (Prithvi Shaw-Sapna Gill) ನಡುವೆ ಫೆಬ್ರವರಿಯಲ್ಲಿ ಮುಂಬೈ ಹೋಟೆಲ್‌ನಲ್ಲಿ ನಡೆದಿದ್ದ ಸೆಲ್ಫಿ ವಿವಾದ ಇಡೀ ಭಾರತದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇಬ್ಬರು ಕೂಡ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಲ್ಲದೆ ನ್ಯಾಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ವಾಸ್ತವವಾಗಿ ಆ ಘಟನೆ ನಡೆದ ದಿನ ನಡೆದದ್ದಾದರೂ ಏನು? ಇದರಲ್ಲಿ ಯಾರದ್ದು ತಪ್ಪು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಘಟನೆಯ ದಿನ ಏನಾಯಿತು ಎಂಬ ವಿಡಿಯೋ ಇದೀಗ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಹೊಟೇಲ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳು (CCTV video) ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಘಟನೆಯ ಬಗ್ಗೆ ಒಂದು ಸ್ಪಷ್ಟನೆ ಸಿಕ್ಕಿದೆ.

ವಾಸ್ತವವಾಗಿ, ಫೆಬ್ರವರಿ 15 ರಂದು ಮುಂಬೈನ ಹೋಟೆಲ್‌ನಲ್ಲಿ ಕ್ರಿಕೆಟಿಗ ಪೃಥ್ವಿ ಶಾ ಅವರು ನಟಿ ಸಪ್ನಾ ಮತ್ತು ಅವರ ಸ್ನೇಹಿತ ಶೋಭಿತ್ ಠಾಕೂರ್ ಅವರೊಂದಿಗೆ ಸೆಲ್ಫಿ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ವಿಷಯ ಎಷ್ಟು ಉಲ್ಬಣಗೊಂಡಿತು ಎಂದರೆ ನಟಿ ಸಪ್ನಾ ಮತ್ತು ಅವರ ಸ್ನೇಹಿತ ಶೋಭಿತ್ ಠಾಕೂರ್, ಹೋಟೆಲ್ ಹೊರಗೆ ಬೇಸ್‌ಬಾಲ್‌ನಿಂದ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಅಲ್ಲದೆ ಪೃಥ್ವಿ ಶಾ ಅವರ ಕಾರನ್ನು ಹಿಂಬಾಲಿಸಿ, ಕಾರನ್ನು ಅಡ್ಡಗಟ್ಟಿ ಕಾರಿನ ಗ್ಲಾಸ್​ ಒಡೆದಿದ್ದರು. ಆ ನಂತರ ಪೃಥ್ವಿ ಅವರ ಸ್ನೇಹಿತ ಸಪ್ನಾ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದರು.

IPL 2023: ಐಪಿಎಲ್ ನಡುವೆ ಪೃಥ್ವಿ ಶಾಗೆ ನೋಟಿಸ್; ಸೆಲ್ಫಿ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಹೆಜ್ಜೆ

ಘಟನೆಯ ವಿಡಿಯೋ ವೈರಲ್

ಇದಾದ ನಂತರ ಸಪ್ನಾ ಕೂಡ ಪೃಥ್ವಿ ಮತ್ತು ಅವರ ಸ್ನೇಹಿತರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವೀಡಿಯೋ ಮುನ್ನೆಲೆಗೆ ಬಂದಿದ್ದು, ಎಲ್ಲಿಂದ ಈ ಜಗಳ ಶುರುವಾಯಿತು ಎಂಬುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿದೆ. ವಿಡಿಯೋದಲ್ಲಿರುವಂತೆ ಪೃಥ್ವಿ ಶಾ ಅವರ ಸ್ನೇಹಿತರೊಂದಿಗೆ ಪಬ್​ನಲ್ಲಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ. ಅದೇ ಸಮಯದಲ್ಲಿ ಪೃಥ್ವಿ ಬಳಿಗೆ ಬಂದ ವ್ಯಕ್ತಿಯೊಬ್ಬರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿದ್ದಾರೆ

ಈ ವೇಳೆ ಆ ವ್ಯಕ್ತಿ ಪೃಥ್ವಿ ಹೆಗಲ ಮೇಲೆ ಕೈ ಹಾಕಿದ್ದಾರೆ. ಇದು ಪೃಥ್ವಿಗೆ ಇಷ್ಟವಾಗಿಲ್ಲ ಎಂದು ಕಾಣುತ್ತದೆ. ಹೀಗಾಗಿ ಈ ಇಬ್ಬರ ನಡುವೆ ಸಣ್ಣದಾಗಿ ಮಾತಿನ ಚಕಮಕಿ ಶುರುವಾಗಿದೆ. ನಂತರ ಶಾ ಅವರ ಸ್ನೇಹಿತ ಇಬ್ಬರನ್ನು ಬೇರ್ಪಡಿಸಲು ಯತ್ನಿಸಿದ್ದಾರೆ. ಆದರೆ ಈ ಇಬ್ಬರನ್ನೂ ಸಮಾಧಾನ ಪಡಿಸುವುದು ಎಷ್ಟು ಕಷ್ಟವಾಗಿತ್ತು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ವಲ್ಪ ಸಮಯದಲ್ಲೇ ವಾತಾವರಣ ಇನ್ನಷ್ಟು ಹದಗೆಟ್ಟಿದ್ದು, ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿರುವುದನ್ನು ಕಾಣಬಹುದಾಗಿದೆ. ಆದರೆ ಈ ಹಿಂದೆ ಸ್ವಪ್ನ ಗಿಲ್ ಆರೋಪಿಸಿದಂತೆ ಹೋಟೆಲ್ ಒಳಗೆ ಶಾ ಮತ್ತು ಆತನ ಸ್ನೇಹಿತರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬುದಕ್ಕೆ ಸ್ಪಷ್ಟ ಸಾಕ್ಷಾಧಾರಗಳು ವಿಡಿಯೋದಲ್ಲಿ ಲಭ್ಯವಾದಂತೆ ತೋರುತ್ತಿಲ್ಲ.

ಆರೋಪ ಸುಳ್ಳು ಎಂದಿದ್ದ ಪೊಲೀಸರು

ಆದಾಗ್ಯೂ, ಈ ಹಿಂದೆ, ಪೃಥ್ವಿ ವಿರುದ್ಧ ಸಪ್ನಾ ಗಿಲ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಮುಂಬೈ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಆ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವರದಿಯನ್ನು ಸಲ್ಲಿಸಿದ ನಂತರ, ಗಿಲ್ ಅವರ ವಕೀಲರು ಘಟನೆಯ ವೀಡಿಯೊ ದೃಶ್ಯಗಳನ್ನು ತೋರಿಸಲು ನ್ಯಾಯಾಲಯದಿಂದ ಅನುಮತಿ ಕೋರಿದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ, ಗಿಲ್‌ ಅವರ ಸ್ನೇಹಿತ ತನ್ನ ಫೋನ್‌ನಿಂದ ರೆಕಾರ್ಡ್ ಮಾಡಿದ್ದ ವಿಡಿಯೋ ಎನ್ನಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:21 am, Fri, 30 June 23