- Kannada News Photo gallery Cricket photos Bombay High Court notice to Team India player Prithvi Shaw in Sapna Gill case
IPL 2023: ಐಪಿಎಲ್ ನಡುವೆ ಪೃಥ್ವಿ ಶಾಗೆ ನೋಟಿಸ್; ಸೆಲ್ಫಿ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಹೆಜ್ಜೆ
Prithvi Shaw: ಸಪ್ನಾ ಅವರ ಅರ್ಜಿಯ ಮೇರೆಗೆ ಪೃಥ್ವಿ ಶಾ, ಅವರ ಸ್ನೇಹಿತ ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ 11 ಜನರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.
Updated on:Apr 13, 2023 | 6:34 PM

ಪ್ರಸ್ತುತ ಐಪಿಎಲ್ನಲ್ಲಿ ನಿರತರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರಿಗೆ ಕಂಟಕ ಎದುರಾಗಿದೆ. ಸಪ್ನಾ ಗಿಲ್ ಪ್ರಕರಣದಲ್ಲಿ ಪೃಥ್ವಿ ವಿರುದ್ಧ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಾಸ್ತವವಾಗಿ ಫೆಬ್ರವರಿಯಲ್ಲಿ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಪ್ನಾ ಗಿಲ್ ನಡುವೆ ಸೆಲ್ಫಿಗೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಈ ವೇಳೆ ಸಪ್ನಾ ಗಿಲ್, ಶಾ ಅವರ ಮೇಲೆ ಬೇಸ್‌ಬಾಲ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೃಥ್ವಿ ಆರೋಪ ಹೊರಿಸಿದ್ದರು. ಆರೋಪದ ನಂತರ ಸಪ್ನಾ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಸಪ್ನಾ, ಪೃಥ್ವಿ ಮೇಲೆ ಮಾರಣಾಂತಿಕ ಆಯುಧದಿಂದ ಹಲ್ಲೆ ಮತ್ತು ಕಿರುಕುಳದ ಆರೋಪ ಮಾಡಿದ್ದರು.

ಬಳಿಕ ಶಾ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದೇ ಸಮಯದಲ್ಲಿ, ಸಪ್ನಾ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಇದೀಗ ಈ ವಿಷಯದ ವಿಚಾರಣೆ ನಡೆದಿದ್ದು, ಸಪ್ನಾ ಅವರ ಅರ್ಜಿಯ ಮೇರೆಗೆ ಪೃಥ್ವಿ ಶಾ, ಅವರ ಸ್ನೇಹಿತ ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ 11 ಜನರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.

ಫೆಬ್ರವರಿಯಲ್ಲಿ , ಶಾ ತನ್ನ ಸ್ನೇಹಿತರೊಂದಿಗೆ ಮುಂಬೈನ ಹೋಟೆಲ್‌ಗೆ ಹೋಗಿದ್ದರು. ಅಲ್ಲಿ ಸಪ್ನಾ ಮತ್ತು ಅವರ ಸ್ನೇಹಿತರೊಬ್ಬರು ಸೆಲ್ಫಿಗಾಗಿ ಪದೇ ಪದೇ ಪೃಥ್ವಿ ಬಳಿ ಮನವಿ ಇಟ್ಟಿದ್ದರು. ಈ ಬಗ್ಗೆ ಶಾ ಹೋಟೆಲ್ ಮ್ಯಾನೇಜರ್‌ಗೆ ದೂರು ನೀಡಿದ್ದು, ಬಳಿಕ ಸಪ್ನಾ ಮತ್ತು ಅವರ ಸ್ನೇಹಿತನನ್ನು ಹೋಟೆಲ್‌ನಿಂದ ಹೊರಹಾಕಲಾಗಿತ್ತು. ಇದರಿಂದ ಕುಪಿತಗೊಂಡ ಸಪ್ನಾ, ಪೃಥ್ವಿ ಹೋಟೆಲ್‌ನಿಂದ ಹೊರಬಂದ ತಕ್ಷಣ ಅವರ ಕಾರನ್ನು ಹಿಂಬಾಲಿಸಿ, ರಸ್ತೆಯಲ್ಲೇ ಗಲಾಟೆ ಮಾಡಿ, ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದರು.

ಸದ್ಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಶಾ, ಆಡಿರುವ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 12, 7, 0 ಮತ್ತು 15 ರನ್ ಬಾರಿಸಿದ್ದಾರೆ. ಅಲ್ಲದೆ ಡೆಲ್ಲಿ ತಂಡ ಆಡಿರುವ 4 ಪಂದ್ಯಗಳಲ್ಲೂ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ.
Published On - 6:34 pm, Thu, 13 April 23
























