- Kannada News Photo gallery Cricket photos IPL 2023 RCB’s Green Game will be played on the 23rd of April
RCB ತಂಡದ ಗ್ರೀನ್ ಗೇಮ್ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಮಾಹಿತಿ
IPL 2023 Kannada: 2011 ರಿಂದ ಐಪಿಎಲ್ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ RCB ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ.
Updated on: Apr 13, 2023 | 8:30 PM

IPL 2023: ಐಪಿಎಲ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ಗೆ ಸೋಲುಣಿಸಿ ಶುಭಾರಂಭ ಮಾಡಿದ್ದ ರೆಡ್ ಆರ್ಮಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ಆರ್ಸಿಬಿ ಗ್ರೀನ್ ಗೇಮ್ಗಾಗಿ ಡೇಟ್ ಫಿಕ್ಸ್ ಮಾಡಿದೆ.

ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಆದರೆ ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವುದು ಏಪ್ರಿಲ್ 23 ರಂದು. ಅದು ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.

ಏಪ್ರಿಲ್ 23 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಮೂಲಕ ತವರು ಮೈದಾನದಲ್ಲಿ ಆರ್ಸಿಬಿ ಫ್ರಾಂಚೈಸಿ ಗೋ ಗ್ರೀನ್ ಅಭಿಯಾನ ನಡೆಸಲಿದೆ.

2011 ರಿಂದ ಐಪಿಎಲ್ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ಆರ್ಸಿಬಿ ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಇದರ ಮೂಲ ಉದ್ದೇಶ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು. ಅದರಲ್ಲೂ ಮರಗಳನ್ನು ಉಳಿಸಿ-ಬೆಳೆಸಿ ಎಂಬ ಸಂದೇಶ ಸಾರಲು ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ.

ಇದಾಗ್ಯೂ 2021 ರ ಐಪಿಎಲ್ ವೇಳೆ ಆರ್ಸಿಬಿ ಗ್ರೀನ್ ಜೆರ್ಸಿ ಬದಲಿಗೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು ಎಂಬುದು ವಿಶೇಷ. ಅಂದು ಕೊರೋನಾ ವಾರಿಯರ್ಸ್ಗೆ ಗೌರವ ಸೂಚಿಸುವ ಸಲುವಾಗಿ ಆರ್ಸಿಬಿ ಪಿಪಿಐ ಕಿಟ್ ಬಣ್ಣದ ಜೆರ್ಸಿಯಲ್ಲಿ ಕೆಕೆಆರ್ ವಿರುದ್ಧ ಪಂದ್ಯವಾಡಿತ್ತು.

ಇದೀಗ 4 ವರ್ಷಗಳ ಬಳಿಕ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡವು ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದು, ಈ ಬಾರಿ ಫಾಫ್ ಡುಪ್ಲೆಸಿಸ್ ಪಡೆಯ ಎದುರಾಳಿ ರಾಜಸ್ಥಾನ್ ರಾಯಲ್ಸ್ ಎಂಬುದಷ್ಟೇ ವ್ಯತ್ಯಾಸ.
























