Updated on: Apr 13, 2023 | 10:08 PM
IPL 2023: ಮೊದಲ ಪಂದ್ಯದಲ್ಲಿ ಭರ್ಜರಿ ಜಯ, ಸತತ ಎರಡು ಸೋಲು...ಇದು ಆರ್ಸಿಬಿ ತಂಡದ ಮೊದಲ ಮೂರು ಪಂದ್ಯಗಳ ಫಲಿತಾಂಶ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಾಯ್ಸ್ 4ನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಈ ಬಾರಿ ಕೂಡ ಕಣಕ್ಕಿಳಿಯುತ್ತಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.
ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಬೇಕಿದ್ದರೆ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲೇಬೇಕು. ಏಕೆಂದರೆ ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ ವಿರುದ್ಧ ಅತೀ ಹೆಚ್ದು ರನ್ ಬಾರಿಸಿದ ಬ್ಯಾಟರ್ ಇರುವುದೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ.
ಹೌದು, ಆರ್ಸಿಬಿ ವಿರುದ್ಧ ಅತೀ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ವಾರ್ನರ್ 4 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸಿದ್ದಾರೆ.
ಇದೀಗ ಬ್ಯಾಟ್ಸ್ಮನ್ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಪಿಚ್ನಲ್ಲಿ ವಾರ್ನರ್ ಅವರನ್ನು ಪವರ್ಪ್ಲೇನಲ್ಲೇ ಕಟ್ಟಿಹಾಕದಿದ್ರೆ ಗೆಲುವು ಸುಲಭವಲ್ಲ. ಏಕೆಂದರೆ ಆರ್ಸಿಬಿ ವಿರುದ್ಧ 21 ಪಂದ್ಯಗಳನ್ನಾಡಿರುವ ವಾರ್ನರ್ 9 ಅರ್ಧಶತಕ ಹಾಗೂ 2 ಶತಕಗಳನ್ನು ಸಿಡಿಸಿದ್ದಾರೆ.
ಅಲ್ಲದೆ ಆರ್ಸಿಬಿ ವಿರುದ್ಧ 163.71 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ವಾರ್ನರ್ ಇದುವರೆಗೆ 943 ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ ವಿರುದ್ಧ ಅತೀ ಹೆಚ್ಚು ರನ್ಗಳಿಸಿದ ಹೆಗ್ಗಳಿಕೆ ಡೇವಿಡ್ ವಾರ್ನರ್ ಅವರದ್ದು.
ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಗೆಲ್ಲಬೇಕಿದ್ದರೆ ಪವರ್ಪ್ಲೇನಲ್ಲೇ ಡೇವಿಡ್ ವಾರ್ನರ್ ವಿಕೆಟ್ ಉರುಳಿಸಲೇಬೇಕು. ಒಂದು ವೇಳೆ ಅವರನ್ನು ಕ್ರೀಸ್ ಕಚ್ಚಿ ನಿಲ್ಲಲು ಬಿಟ್ಟರೆ ಅದು ಆರ್ಸಿಬಿ ಪಾಲಿಗೆ ಮುಳುವಾಗುವುದರಲ್ಲಿ ಸಂದೇಹವೇ ಇಲ್ಲ.