Shubman Gill: ಲೋಕಸಭಾ ಚುನಾವಣೆಯಲ್ಲಿ ಶುಭ್​ಮನ್ ಗಿಲ್​ಗೆ ಹೊಸ ಜವಬ್ದಾರಿ

|

Updated on: Feb 19, 2024 | 8:06 PM

Shubman Gill: ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮುಂಬರುವ ಲೋಕಸಭೆ ಚುನಾವಣೆಗೆ ಭಾರತೀಯ ಕ್ರಿಕೆಟಿಗ ಶುಭ್​ಮನ್ ಗಿಲ್ ಅವರನ್ನು ರಾಜ್ಯ ಚುನಾವಣಾ ಐಕಾನ್ ಆಗಿ ನೇಮಿಸಿದೆ. ಇದೀಗ ಹೊಸ ಜವಬ್ದಾರಿಯನ್ನು ವಹಿಸಿಕೊಂಡಿರುವ ಶುಭ್​ಮನ್ ಗಿಲ್, ಚುನಾವಣೆಗೂ ಮುನ್ನ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ.

Shubman Gill: ಲೋಕಸಭಾ ಚುನಾವಣೆಯಲ್ಲಿ ಶುಭ್​ಮನ್ ಗಿಲ್​ಗೆ ಹೊಸ ಜವಬ್ದಾರಿ
ಶುಭ್​ಮನ್ ಗಿಲ್
Follow us on

ಲೋಕಸಭೆ ಚುನಾವಣೆಗೂ (Lok Sabha Elections) ಮುನ್ನ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್​ಗೆ (Shubman Gill) ಪಂಜಾಬ್ ರಾಜ್ಯ ಚುನಾವಣಾ ಆಯೋಗ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದು, ಯುವ ಆರಂಭಿಕ ಆಟಗಾರನನ್ನು ಪಂಜಾಬ್‌ನ ರಾಜ್ಯ ಚುನಾವಣಾ ಐಕಾನ್ (State Icon) ಆಗಿ ಆಯ್ಕೆ ಮಾಡಿದೆ. ಇದೀಗ ಹೊಸ ಜವಬ್ದಾರಿಯನ್ನು ವಹಿಸಿಕೊಂಡಿರುವ ಶುಭ್​ಮನ್ ಗಿಲ್, ಚುನಾವಣೆಗೂ ಮುನ್ನ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದಾರೆ. ಸ್ವತಃ ಈ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿ ಸಿಬಿನ್ ಸಿ. ಹಂಚಿಕೊಂಡಿದ್ದಾರೆ.

ಜಾಗೃತಿ ಮೂಡಿಸುವುದು ಇದರ ಉದ್ದೇಶ

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯ ಚುನಾವಣಾಧಿಕಾರಿ, ಕ್ರಿಕೆಟಿಗ ಶುಭ್​ಮನ್​ ಗಿಲ್​ಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಅದರಂತೆ ಗಿಲ್ ಪ್ರತ್ಯೇಕವಾಗಿ ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಲಿದ್ದಾರೆ. ರಾಜ್ಯದಲ್ಲಿ ಮತದಾನದ ಪ್ರಮಾಣ ಶೇ 70ರ ಗಡಿ ದಾಟುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಈ ಬಾರಿ 70 ದಾಟಬೇಕು

2019 ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇಕಡಾ 65.96 ರಷ್ಟು ಮತದಾನವಾಗಿತ್ತು. ಈ ಬಾರಿಯ ಮತದಾನವನ್ನು ಶೇ.70ರಷ್ಟಕ್ಕೆ ಏರಿಸುವುದು ನಮ್ಮ ಗುರಿಯಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ‘ಈ ಬಾರಿ 70 ದಾಟಬೇಕು’ ಎಂಬ ಘೋಷವಾಕ್ಯದೊಂದಿಗೆ ಆಯೋಗ ಚುನಾವಣಾ ಪ್ರಚಾರ ನಡೆಸುತ್ತಿದೆ.

ಕಳೆದ ಶುಕ್ರವಾರ ನಡೆದ ಪಂಜಾಬ್‌ನ ಎಲ್ಲಾ ಡೆಪ್ಯುಟಿ ಕಮಿಷನರ್‌ಗಳೊಂದಿಗಿನ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಕಡಿಮೆ ಇರುವ ಪ್ರದೇಶಗಳನ್ನು ಗುರುತಿಸಲು ಹೇಳಲಾಗಿತ್ತು. ಅದರಂತೆ ಇದೀಗ ಗುರುತಿಸಿರುವ ಸ್ಥಳಗಳಲ್ಲಿ ಗಿಲ್ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಗಿಲ್ ಯುವ ಪ್ರತಿಭಾವಂತ ಕ್ರಿಕೆಟಿಗನಾಗಿದ್ದು, ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿಲಿದ್ದಾರೆ. ಇದು ಪ್ರತಿಯೊಬ್ಬರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತದೆ ಮತ್ತು ಮತದಾನದ ಶೇಕಡಾವಾರು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಿಂದೆ, ಜನಪ್ರಿಯ ಪಂಜಾಬಿ ಗಾಯಕ ತಾರ್ಸೆಮ್ ಜಸ್ಸರ್ ಅವರನ್ನು ‘ರಾಜ್ಯ ಚುನಾವಣಾ ಐಕಾನ್’ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಆ ಜವಬ್ದಾರಿಯನ್ನು ಗಿಲ್ ನಿರ್ವಹಿಸಲಿದ್ದಾರೆ ಎಂದಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಗಿಲ್

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಅದ್ಭುತ ಶತಕ ಸಿಡಿಸಿದ್ದರು. 12 ಇನ್ನಿಂಗ್ಸ್‌ಗಳ ನಂತರ ಅವರ ಬ್ಯಾಟ್‌ನಿಂದ ಈ ಶತಕ ಸಿಡಿದಿತ್ತು. ಅದೇ ವೇಳೆ ಮೂರನೇ ಟೆಸ್ಟ್‌ನಲ್ಲೂ ಶತಕ ಸಿಡಿಸುವ ಹೊಸ್ತಿಲಿನಲ್ಲಿದ್ದರು. ಆದರೆ 91 ರನ್​ಗಳಿದ್ದಾಗ ಗಿಲ್​ ರನೌಟ್​ಗೆ ಬಲಿಯಾಗಿ ಕೇವಲ 9 ರನ್​ಗಳಿಂದ ಶತಕ ವಂಚಿತರಾದರು. ಇದುವರೆಗೆ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಶುಭಮನ್ ಗಿಲ್ ಇಲ್ಲಿಯವರೆಗೆ 252 ರನ್ ಕಲೆಹಾಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Mon, 19 February 24