CSK ಗೆ ಕೈಕೊಟ್ಟ ಕೀರನ್ ಪೊಲಾರ್ಡ್​..!

ಸೌತ್ ಆಫ್ರಿಕಾ ಟಿ20 ಲೀಗ್‌ನ 5ನೇ ಆವೃತ್ತಿಯು ಜನವರಿ 17 ರಿಂದ ಫೆಬ್ರವರಿ 21, 2027 ರವರೆಗೆ ಜರುಗಲಿದೆ. ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ರನ್ನರ್-ಅಪ್ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದೀಗ ಈ ಟೂರ್ನಿಯಿಂದ ಕೀರನ್ ಪೊಲಾರ್ಡ್ ಹೊರಗುಳಿದಿದ್ದಾರೆ.

CSK ಗೆ ಕೈಕೊಟ್ಟ ಕೀರನ್ ಪೊಲಾರ್ಡ್​..!
Kieron Pollard
Image Credit source: SA20

Updated on: Oct 26, 2026 | 9:11 AM

ಸೌತ್ ಆಫ್ರಿಕಾ ಟಿ20 ಟೂರ್ನಿ ಆರಂಭಕ್ಕೂ ಮುನ್ನವೇ ಜೊಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು, ವೆಸ್ಟ್ ಇಂಡೀಸ್‌ನ ದಿಗ್ಗಜ ಆಲ್ ರೌಂಡರ್ ಕೀರನ್ ಪೊಲಾರ್ಡ್ ಮುಂಬರುವ ಸೀಸನ್‌ನಿಂದ ದಿಢೀರ್ ಹೊರಗುಳಿಯಲು ನಿರ್ಧರಿಸಿದ್ದಾರೆ. ಐಪಿಎಲ್ 2027 ಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಕಾರಣ ಬೆನ್ನಲ್ಲೇ ಪೊಲಾರ್ಡ್​ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಹರಾಜಿನಲ್ಲಿ 1.5 ಮಿಲಿಯನ್ ರಾಂಡ್ಸ್ ನೀಡಿ ಕೀರನ್ ಪೊಲಾರ್ಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೆಎಸ್‌ಕೆ (JSK) ಫ್ರಾಂಚೈಸಿ ಖರೀದಿಸಿತ್ತು. ಇದೀಗ ಟೂರ್ನಿ ಆರಂಭಕ್ಕೂ ತಂಡಕ್ಕೆ ಮುನ್ನ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದಿಂದ ಪೊಲಾರ್ಡ್ ಹೊರ ನಡೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಅದರ ಜಾಗತಿಕ ಫ್ರಾಂಚೈಸಿಗಳ ಸಿಇಒ ಆದ ಕಾಶಿ ವಿಶ್ವನಾಥನ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ಪೊಲಾರ್ಡ್ ಅವರು ಈ ಬಾರಿ ಜೊಬರ್ಗ್ ಸೂಪರ್ ಕಿಂಗ್ಸ್ ಪರ ಆಡಲು ಸಾಧ್ಯವಾಗುತ್ತಿಲ್ಲ ಎಂದು ನಮಗೆ ತಿಳಿಸಿದ್ದಾರೆ. ನಾವು ಶೀಘ್ರದಲ್ಲೇ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಹುಡುಕಲಿದ್ದೇವೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಿಢೀರ್ ನಿರ್ಧಾರಕ್ಕೆ ಕಾರಣವೇನು?

ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ತಂಡವು ಕೀರನ್ ಪೊಲಾರ್ಡ್ ಅವರನ್ನು ಮುಂಬರುವ ಐಪಿಎಲ್ (IPL 2027) ಸೀಸನ್‌ಗಾಗಿ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಮುಂಬೈ ಫ್ರಾಂಚೈಸಿಯೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ ಪೊಲಾರ್ಡ್, ಕೋಚಿಂಗ್ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ, ಆಟಗಾರರ ರಿಟೆನ್ಷನ್ ಮತ್ತು ತಂಡದ ಕಾರ್ಯತಂತ್ರ ರೂಪಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ, ಅವರಿಗೆ ಸೌತ್ ಆಫ್ರಿಕಾದಲ್ಲಿ ಆಡಲು ಸಮಯ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

MI ಟು JSK:

ಕಳೆದ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್‌ನ ಸಹೋದರ ಸಂಸ್ಥೆಯಾದ ‘MI ಕೇಪ್ ಟೌನ್’ ಪರ ಆಡಿದ್ದ ಪೊಲಾರ್ಡ್ ಅವರನ್ನು ಈ ಬಾರಿಯ SA20 ಹರಾಜಿಗೂ ಮುನ್ನ ಬಿಡುಗಡೆ ಮಾಡಲಾಗಿತ್ತು. ಹರಾಜಿನಲ್ಲಿ ಅವರ ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ ಒಡೆತನದ ಜೊಬರ್ಗ್ ಸೂಪರ್ ಕಿಂಗ್ಸ್ ತಂಡವು ಪೊಲಾರ್ಡ್ ಅವರನ್ನು 1.5 ಮಿಲಿಯನ್ ರಾಂಡ್ಸ್ ನೀಡಿ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಹಳದಿ ಜರ್ಸಿಯಲ್ಲಿ ಪೊಲಾರ್ಡ್ ಆಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಆದರೆ ಈಗ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.

ಇದನ್ನೂ ಓದಿ: ಚೆಂಡೆಸೆದರೆ…. ಬ್ಯಾಟ್ ಎಸಿತೀನಿ: ಕೆರಳಿದ ಕೀರನ್ ಪೊಲಾರ್ಡ್​!

ಬದಲಿ ಆಟಗಾರನ ಹುಡುಕಾಟ:

SA20 ಟೂರ್ನಿಯು ಮುಂಬರುವ ಜನವರಿ 17 ರಿಂದ ಫೆಬ್ರವರಿ 21 ರವರೆಗೆ ನಡೆಯಲಿದೆ. ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ, ಜೆಎಸ್‌ಕೆ ತಂಡಕ್ಕೆ ಕೀರನ್ ಪೊಲಾರ್ಡ್ ಅವರಂತಹ ಅನುಭವಿ ಮತ್ತು ಸ್ಫೋಟಕ ಫಿನಿಷರ್ ಸ್ಥಾನವನ್ನು ತುಂಬಬಲ್ಲ ಪ್ರಬಲ ವಿದೇಶಿ ಆಟಗಾರನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

Published On - 8:00 am, Mon, 26 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us