ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) 17ನೇ ಆವೃತ್ತಿಯ ಐಪಿಎಲ್ನ (IPL 2024) ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಮಾರು 3 ವಾರಗಳ ಹಿಂದೆ ಆರ್ಸಿಬಿ, 8 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ 10 ತಂಡಗಳ ಪೈಕಿ ಕೊನೆಯ ಸ್ಥಾನದಲ್ಲಿತ್ತು. ಅಲ್ಲದೆ ಸತತ 6 ಸೋಲು ಕಂಡಿದ್ದ ಆರ್ಸಿಬಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ನಂತರ ಆರ್ಸಿಬಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ಗೆ ಲಗ್ಗೆ ಇಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ತಂಡಕ್ಕೆ ಮಾತ್ರವಲ್ಲ, ಆರ್ಸಿಬಿಯ ಕೋಟ್ಯಾಂತರ ಅಭಿಮಾನಿಗಳಿಗೂ ಮರೆಯದ ಕ್ಷಣವಾಗಿದೆ. ಹೀಗಾಗಿ ತಂಡ ಗೆದ್ದ ಬಳಿಕ ಆರ್ಸಿಬಿ ಅಭಿಮಾನಿಗಳು ರಾತ್ರಿ ಇಡೀ ಸಂಭ್ರಮಾಚರಣೆ ನಡೆಸಿದ್ದರು. ಇತ್ತ ಪ್ಲೇಆಫ್ ರೇಸ್ನಿಂದ ಹೊರಬಿದ್ದ ಸಿಎಸ್ಕೆ (CSK) ನಿರಾಸೆಯೊಂದಿಗೆ ಲೀಗ್ಗೆ ವಿದಾಯ ಹೇಳಿದರೆ, ಈ ತಂಡದ ಅಭಿಮಾನಿಗಳು ಇದೀಗ ಆರ್ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ವಾಸ್ತವವಾಗಿ ನಿನ್ನೆಯ ಪಂದ್ಯ ಬೆಂಗಳೂರಿನಲ್ಲೇ ನಡೆದರೂ ಎರಡು ತಂಡಗಳ ಆಟಗಾರರು ಭಾರಿ ಪ್ರಮಾಣದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಈ ಇಬ್ಬರ ಮುಖಾಮುಖಿಯಾದಾಗಲೆಲ್ಲ ಉಭಯ ತಂಡಗಳ ಅಭಿಮಾನಿಗಳ ನಡುವೆ ಮಾತಿನ ಚಕಮಕಿ, ಪರಸ್ಪರ ಹೀಯಾಳಿಸುವ ಘಟನೆಗಳು ನಡೆಯುವುದು ಸಹಜ. ಅದು ಬೆಂಗಳೂರೇ ಆಗಿರಲಿ, ಚೆನ್ನೈ ಆಗಿರಲಿ, ಎರಡೂ ತಂಡಗಳ ಅಭಿಮಾನಿಗಳ ನಡುವೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಅಭಿಮಾನಿಗಳ ಕಾಳಗದಿಂದ ತೊಂದರೆಗೊಳಗಾದವರು ಪಂದ್ಯ ಮುಗಿದ ಬಳಿಕ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಳನ್ನು ತೊಡಿಕ್ಕೊಳುವುದನ್ನು ನಾವು ನೋಡಿದ್ದೇವೆ.
ಇದೀಗ ನಿನ್ನೆಯ ಪಂದ್ಯದಲ್ಲೂ ಈ ರೀತಿಯ ಘಟನೆ ನಡೆದಿರುವುದಾಗಿ ಸಿಎಸ್ಕೆ ಅಭಿಮಾನಿಗಳು, ಆರ್ಸಿಬಿ ಅಭಿಮಾನಿಗಳ ವಿರುದ್ಧ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಹಾಗೂ ಸುತ್ತಮುತ್ತ ಸಿಎಸ್ಕೆ ಜೆರ್ಸಿ ತೊಟ್ಟವರಿಗೆ ಸಾಕಷ್ಟು ತೊಂದರೆ ನೀಡಲಾಗುತ್ತಿದೆ. ಆರ್ಸಿಬಿ ಅಭಿಮಾನಿಗಳು, ಸಿಎಸ್ಕೆ ಅಭಿಮಾನಿಗಳನ್ನು ನಿಂದಿಸುತ್ತಿದ್ದಾರೆ. ಕಂಠಪೂರ್ತಿ ಕುಡಿದು ದಾರಿಯಲ್ಲಿ ವೇಗವಾಗಿ ವಾಹನಗಳನ್ನು ಓಡಿಸುತ್ತಾ ದಾರಿಯಲ್ಲಿ ಹೊಗುತ್ತಿದ್ದ ಸಿಎಸ್ಕೆ ಅಭಿಮಾನಿಗಳನ್ನು ಹೆದರಿಸುತ್ತಿದ್ದಾರೆ ಎಂದು ಅನ್ನಿ ಸ್ಟೀವ್ ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Feeling unsafe wearing a csk jersey outside and around Chinnaswamy stadium. RCB fans (men) here are abusing and bullying every single person walking by. So Many men out here are so drunk and abusing on face be it women or men. People are also rash driving, scaring tf out us.
— Annie Steve (@annieSteeph) May 18, 2024
ಇನ್ನು ಕೆಲವರು, ಆರ್ಸಿಬಿ ಅಭಿಮಾನಿಗಳು ನಮ್ಮನ್ನು ರಸ್ತೆಯಲ್ಲೇ ಸಿಎಸ್ಕೆ ಜೆರ್ಸಿ ತೆಗೆಯುವಂತೆ ಬೆದರಿಸಿದರು. ಇವರು ಮನುಷ್ಯರೇ ಅಲ್ಲ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನಾವು ಕ್ರೀಡಾಂಗಣದಿಂದ ಹೊರ ನಡೆಯುತ್ತಿರುವಾಗಿ ಆರ್ಸಿಬಿ ಅಭಿಮಾನಿಗಳು ನಮ್ಮನ್ನು ಕಂಡು ಜೋರಾಗಿ ಕಿರುಚುತ್ತಿದ್ದರು. ನಾವು ಭಯದಿಂದ ಕ್ಯಾಬ್ ಹತ್ತಿ ಮನೆಯತ್ತ ಹೊರಟೆವು ಎಂದು ಬರೆದುಕೊಂಡಿದ್ದಾರೆ.
ಇದೆಲ್ಲದರ ನಡುವೆಯೂ ಕೆಲವು ಆರ್ಸಿಬಿ ಅಭಿಮಾನಿಗಳು ನಮ್ಮ ರಕ್ಷಣೆಗೆ ಬಂದರು ಮತ್ತು ಸುರಕ್ಷಿತವಾಗಿ ನಾವು ಅಲ್ಲಿಂದ ತೆರಳಲು ನಮಗೆ ಸಹಾಯ ಮಾಡಿದರು ಎಂದು ಇನ್ನೊಬ್ಬ ನೆಟ್ಟಿಗ ಬರೆದುಕೊಂಡಿದ್ದಾನೆ.
ಆದಾಗ್ಯೂ, ಸಿಎಸ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಅಭಿಮಾನಿಗಳ ವಿರುದ್ಧ ಆರೋಪ ಹೊರಿಸಿದ್ದರಾದರೂ, ಈ ಬಗ್ಗೆ ಯಾವುದೇ ಪ್ರಕರಣಗಳು ಅಥವಾ ದೂರುಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ರೀತಿಯಾಗಿ ತೊಂದರೆಗೆ ಒಳಗಾದವರು 112 ಗೆ ಕರೆ ಮಾಡುವಂತೆ ಕೇಳಿಕೊಂಡಿದ್ದಾರೆ.
To our fans who came and supported us today at Bangalore.
Hope you reached home safe!💛
Forever grateful for your love and support! 🫂💛#YelloveForever— Chennai Super Kings (@ChennaiIPL) May 18, 2024
ಏತನ್ಮಧ್ಯೆ, ಸಿಎಸ್ಕೆ ತಂಡವನ್ನು ಬೆಂಬಲಿಸಲು ಬಂದಿದ್ದ ತನ್ನ ಅಭಿಮಾನಿಗಳಿಗೆ ಸಿಎಸ್ಕೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದ್ದು, ‘ಇಂದು ಬೆಂಗಳೂರಿಗೆ ಬಂದು ನಮ್ಮನ್ನು ಬೆಂಬಲಿಸಿದ ನಮ್ಮ ಅಭಿಮಾನಿಗಳಿಗೆ, ನೀವು ಸುರಕ್ಷಿತವಾಗಿ ಮನೆಗೆ ತಲುಪಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದೆ.
Published On - 5:22 pm, Sun, 19 May 24