CSK Vs RCB: ಸಿಎಸ್​ಕೆ ವಿರುದ್ಧ ರಾಯಲ್​ ಚಾಲೆಂಜರ್ಸ್​ಗೆ 23 ರನ್​ಗಳ ಸೋಲು; ಸ್ಟಾರ್​ಗಳೇ ತುಂಬಿರುವ ಆರ್​ಸಿಬಿ ಎಡವಿದ್ದೆಲ್ಲಿ?

| Updated By: shivaprasad.hs

Updated on: Apr 13, 2022 | 8:06 AM

CSK Vs RCB Match Result: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ 23 ರನ್​ಗಳಿಂದ ಶರಣಾಗಿದೆ. ಆರ್​ಸಿಬಿ ಎಡವಿದ್ದೆಲ್ಲಿ? ಪಂದ್ಯ ಸೋಲಲು ಕಾರಣಗಳೇನು?

CSK Vs RCB: ಸಿಎಸ್​ಕೆ ವಿರುದ್ಧ ರಾಯಲ್​ ಚಾಲೆಂಜರ್ಸ್​ಗೆ 23 ರನ್​ಗಳ ಸೋಲು; ಸ್ಟಾರ್​ಗಳೇ ತುಂಬಿರುವ ಆರ್​ಸಿಬಿ ಎಡವಿದ್ದೆಲ್ಲಿ?
ಜಯದ ನಂತರ ಸಿಎಸ್​​ಕೆ ಆಟಗಾರರು ಹಾಗೂ ಆರ್​ಸಿಬಿಯ ಜೋಶ್ ಹ್ಯಾಜಲ್​ವುಡ್ (Credits: IPL/Twitter)
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ (IPL- 2022) ಆರ್​ಸಿಬಿ 23 ರನ್​ಗಳಿಂದ ಶರಣಾಗಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಖಾತೆ ತೆರೆದಿದೆ. ರವೀಂದ್ರ ಜಡೇಜಾ ಕಪ್ತಾನನಾಗಿ ಮೊದಲ ಗೆಲುವು ಕಂಡಿದ್ದಾರೆ.  ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ, 10ನೇ ಓವರ್ ತನಕ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತ್ತು. ಮೊದಲ ಹತ್ತು ಓವರ್​ಗಳಲ್ಲಿ ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 60 ರನ್​ಗಳನ್ನಷ್ಟೇ ಗಳಿಸಿತ್ತು. ಆಗ ಜತೆಯಾದ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಪಂದ್ಯದ ಗತಿಯನ್ನೇ ಬದಲಿಸಿದರು. ಪರಿಣಾಮವಾಗಿ ಸಿಎಸ್​ಕೆ ನಂತರದ ಹತ್ತು ಓವರ್​ಗಳಲ್ಲಿ ಬರೋಬ್ಬರಿ 165 ರನ್ ಪೇರಿಸಿತು. ಸಿಎಸ್​​ಕೆ ಪರ ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಚಚ್ಚಿದರು. ಅದರಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್ ಸೇರಿತ್ತು. ಶಿವಂ ದುಬೆ 46 ಎಸೆತಗಳಲ್ಲಿ 95 ರನ್​ಗಳ ಸ್ಫೋಟಕ ಆಟವಾಡಿ ಔಟ್ ಆಗದೆ ಉಳಿದರು. ಈ ಇನ್ನಿಂಗ್ಸ್​ನಲ್ಲಿ ದುಬೆ ಅವರಿಂದ 5 ಫೋರ್ ಹಾಗೂ 8 ಸಿಕ್ಸರ್ ಸಿಡಿಸಲ್ಪಟ್ಟವು. ದುಬೆ- ಉತ್ತಪ್ಪ ಜತೆಯಾಟ ಸಾಗುತ್ತಿದ್ದಾಗ ಈರ್ವರೂ ಶತಕ ಗಳಿಸುವ ನಿರೀಕ್ಷೆ ಇತ್ತು. ಕೊನೆಯ ಓವರ್​ಗಳಲ್ಲಿ ಆರ್​ಸಿಬಿ ತುಸು ಪ್ರತಿರೋಧ ಒಡ್ಡಿದ ಪರಿಣಾಮ ಇದು ಸಾಧ್ಯವಾಗಲಿಲ್ಲ. ಒಟ್ಟಾರೆ ಸಿಎಸ್​ಕೆ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 216 ರನ್​ ಗಳಿಸಿ ಬೃಹತ್ ಗುರಿಯನ್ನು ಆರ್​ಸಿಬಿಗೆ ನೀಡಿತು.

ಹರ್ಷಲ್ ಪಟೇಲ್ ಇಲ್ಲದ ಆರ್​ಸಿಬಿ ಇನ್ನಿಂಗ್ಸ್ ಮಧ್ಯದ ಓವರ್​ಗಳಲ್ಲಿ ಸಂಪೂರ್ಣ ಹಳಿತಪ್ಪಿತ್ತು. ಪದಾರ್ಪಣೆ ಪಂದ್ಯವಾಡಿದ ಜೋಶ್ ಹ್ಯಾಝಲ್​ವುಡ್ ಹಾಗೂ ಸ್ಪಿನ್ನರ್ ವನಿಂದು ಹಸರಂಗ ಮಾತ್ರ ಆರ್​ಸಿಬಿ ಪರ ವಿಕೆಟ್ ಪಡೆಯಲು ಸಫಲರಾದರು. ಹಸರಂಗ 3 ಓವರ್​ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ಹ್ಯಾಝಲ್​ವುಡ್ 4 ಓವರ್​ಗಳಲ್ಲಿ 33 ರನ್ ನೀಡಿ 1 ವಿಕೆಟ್ ಪಡೆದರು.

ನಿರೀಕ್ಷಿತ ಪ್ರದರ್ಶನ ತೋರದ ಆರ್​ಸಿಬಿ ಸ್ಟಾರ್​ಗಳು; ಮಧ್ಯಮ ಕ್ರಮಾಂಕವೊಂದೇ ಗಮನಾರ್ಹ ಅಂಶ!

ಆರ್​​ಸಿಬಿಯ ಇತ್ತೀಚಿನ ಪ್ರದರ್ಶಗಳಲ್ಲಿ ಮಧ್ಯಮ ಕ್ರಮಾಂಕದ ಕೊಡುಗೆ ಅದ್ಭುತವಾಗಿ ಮೂಡಿಬರುತ್ತಿದೆ. ಆದರೆ ಮಧ್ಯಮ ಕ್ರಮಾಂಕ ಕ್ಲಿಕ್ ಆಗುವಾಗ ಆರಂಭಿಕರಿಂದ ಉತ್ತಮ ಜತೆಯಾಟ ಸಿಕ್ಕುತ್ತಿಲ್ಲ. ಸಿಎಸ್​ಕೆ ವಿರುದ್ಧವೂ ಆರ್​ಸಿಬಿ ಬ್ಯಾಟಿಂಗ್ ಇದೇ ಸಮಸ್ಯೆ ಎದುರಿಸಿತು. ಕಪ್ತಾನ ಫಾಫು ಡು ಪ್ಲೆಸಿಸ್ 8 ರನ್​ಗಳಿಗೆ, ಅನುಜ್ ರಾವತ್ 12 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 1 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಪವರ್​ಪ್ಲೇಯೊಳಗೆ ಆರ್​ಸಿಬಿ 3 ವಿಕೆಟ್ ಕಳೆದುಕೊಂಡಿತ್ತು.

ನಾಲ್ಕನೇ ಕ್ರಮಾಂಕದಲ್ಲಿ ಬಂದ ಮ್ಯಾಕ್ಸ್​ವೆಲ್ ಆರಂಭದಿಂದಲೇ ಅಬ್ಬರಿಸಿದರು. 11 ಎಸೆತಗಳಲ್ಲಿ 26 ರನ್ ಗಳಿಸಿದ್ದ ಅವರು ಅದಾಗಲೇ 2 ಬೌಂಡರಿ, 2 ಸಿಕ್ಸರ್ ಬಾರಿಸಿದ್ದರು. ಆದರೆ ರವೀಂದ್ರ ಜಡೇಜಾ ಮ್ಯಾಕ್ಸಿಗೆ ಪೆವಿಲಿಯನ್ ಹಾದಿ ತೋರಿಸಿದರು. ಸುಯಶ್ ಪ್ರಭುದೇಸಾಯಿ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿದರು. 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 34 ರನ್ ಗಳಿಸಿದರು.

ಶಾಬಾಜ್ ಅಹ್ಮದ್ ಅವರ ಅದ್ಭುತ ಫಾರ್ಮ್ ಈ ಪಂದ್ಯದಲ್ಲೂ ಮುಂದುವರೆಯಿತು. 27 ಎಸೆತಗಳಲ್ಲಿ 41 ರನ್​ಗಳಲ್ಲಿ ಅವರು ಸಿಡಿಸಿದರು. ಆದರೆ ಆರ್​ಸಿಬಿ ಪರ ದೊಡ್ಡ ಜತೆಯಾಟ ಮೂಡಿಬರಲಿಲ್ಲ. ದಿನೇಶ್ ಕಾರ್ತಿಕ್ ಕ್ರೀಸ್​ಗೆ ಇಳಿದಾಗ ಅವರಿದ್ದ ಫಾರ್ಮ್​ನಲ್ಲಿ ಅಭಿಮಾನಿಗಳಿಗೆ ಗೆಲ್ಲುವ ನಿರೀಕ್ಷೆ ಇತ್ತು. 14 ಎಸೆತಗಳಲ್ಲಿ 2 ಬಂಡರಿ 3 ಸಿಕ್ಸರ್ ಮೂಲದ 34 ರನ್​ ಗಳಿಸಿದ್ದ ಡಿಕೆ ಬ್ರಾವೋ ಎಸೆತದಲ್ಲಿ ಔಟ್ ಆದರು. ಅಂತಿಮವಾಗಿ ಆರ್​ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ, 23 ರನ್​ಗಳಿಂದ ಸಿಎಸ್​ಕೆ ಶರಣಾಯಿತು. ಸಿಎಸ್​ಕೆ ಪರ ಮಹೀಶ್ ತೀಕ್ಷಣ 4 ವಿಕೆಟ್ ಹಾಗೂ ಜಡೇಜಾ 3 ವಿಕೆಟ್ ಪಡೆದರು. ಪಂದ್ಯದ ಗತಿಯನ್ನೇ ಬದಲಿಸಿದ ಶಿವಂ ದುಬೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

ಆರ್​ಸಿಬಿಗೆ ಈ ಪಂದ್ಯ ಎಚ್ಚರಿಕೆಯ ಸೂಚನೆ ನೀಡಿದೆ. ಬೌಲಿಂಗ್ ವಿಭಾಗ ಹಾಗೂ ಆರಂಭಿಕ ಜತೆಯಾಟದ ಬಗ್ಗೆ ತಂಡ ಇನ್ನಷ್ಟು ಎಚ್ಚರ ಗಮನ ಹರಿಸಬೇಕಿದೆ. ಇತ್ತ ಸಿಎಸ್​ಕೆ ಆರ್​ಸಿಬಿ ವಿರುದ್ಧ ಅಧಿಕಾರಯುತ ಗೆಲುವಿನ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಇಂದು (ಬುಧವಾರ) ಮುಂಬೈ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಲಿವೆ.

ಇದನ್ನೂ ಓದಿ: IPL 2022: ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಅರ್ಜುನ ರಣತುಂಗಾ ಐಪಿಎಲ್​ ಬಿಡಿ ಎಂದಿದ್ದೇಕೆ?

IPL 2022: CSK ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಐಪಿಎಲ್​ನಿಂದ ಔಟ್