ಈ ಬಾರಿ 10 ತಂಡಗಳೊಂದಿಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಇನ್ನೇನು ಒಂದು ವಾರವಷ್ಟೆ ಬಾಕಿ ಉಳಿದಿದೆ. ಮಾರ್ಚ್ 26 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಭರ್ಜರಿ ಚಾಲನೆ ಸಿಗಲಿದೆ. ಮೊದಲ ಪಂದ್ಯವೇ ಹೈವೋಲ್ಟೇಜ್ ಮ್ಯಾಚ್ ಆಗುವ ನಿರೀಕ್ಷೆಯಿದ್ದು, ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನಾಯಕನಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟೀಮ್ ಇಂಡಿಯಾದ ಕೆಲ ಆಟಗಾರರು ಬಯೋ ಬಬಲ್ನಿಂದ ನೇರವಾಗಿ ತಮ್ಮ ತಂಡ ಸೇರಿಕೊಂಡಿದ್ದರೆ, ವಿದೇಶಿ ಆಟಗಾರರು ಒಬ್ಬೊಬ್ಬರಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಕಡ್ಡಾಯ ಕ್ವಾರಂಟೈನ್ ಮುಗಿಸಿದ ನಂತರ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ. ಇದರ ನಡುವೆ ಸದ್ದಿಲ್ಲದೆ ಐಪಿಎಲ್ 2022 (IPL 2022) ಕ್ಕಾಗಿ ಭಾರತಕ್ಕೆ ಅಪಾಯಕಾರಿ ವೇಗಿ ಡೇಲ್ ಸ್ಟೇನ್ (Dale Steyn) ಕಾಲಿಟ್ಟಿದ್ದಾರೆ. ಆದರೆ, ಈ ಬಾರಿ ಇವರು ಆಟಗಾರನಾಗಿ ಬಂದಿಲ್ಲ. ಬದಲಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಐಪಿಎಲ್ಗೆ ಎಂಟ್ರಿಕೊಟ್ಟಿದ್ದಾರೆ.
ಹೌದು, ದಕ್ಷಿಣ ಆಫ್ರಿಕಾ ಕ್ರಿಕೆಟ್ನ ದಂತಕಥೆ ಡೇಲ್ ಸ್ಟೇನ್ ಗುರುವಾರ ಐಪಿಎಲ್ 2022ಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ಎಸ್ ಆರ್ಎಚ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದೀಗ ತಂಡದ ಕಾರ್ಯತಂತ್ರದ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಜೊತೆ ಸ್ಟೇಯ್ನ ಕೂಡ ಸೇರಿಕೊಂಡಿದ್ದಾರೆ. ಅಲ್ಲದೆ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರು ಸ್ಪಿನ್ ಕೋಚ್ ಮತ್ತು ಹೇಮಾಂಗ್ ಬದಾನಿ ಅವರು ಫೀಲ್ಡಿಂಗ್ ಕೋಚ್ ಆಗಿದ್ದು ಹೈದರಾಬಾದ್ ತಂಡ ಅತ್ಯಂತ ಬಲಿಷ್ಠವಾದಂತೆ ಗೋಚರಿಸುತ್ತಿದೆ.
ಫ್ರಾಂಚೈಸಿ ಈ ಬಗ್ಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, “ಭಾರತಕ್ಕೆ ಹಿಂದಿರುಗಿದ ನಂತರ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಸ್ವಲ್ಪ ಸಮಯ ಭಾರತದಲ್ಲಿ ಇದ್ದೆ. ಆದ್ದರಿಂದ ಇದೀಗ ಮತ್ತೆ ನಾನು ಹಿಂತಿರುಗಿದ್ದು ತುಂಬಾ ಉತ್ಸುಕನಾಗಿದ್ದೇನೆ. ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಹಲವು ನೆನಪುಗಳು ಕಾಡಿತು. ಇದು ಅದ್ಭುತವಾದ ಆಟಗಾರರನ್ನು ವೀಕ್ಷಿಸಲು ಸಂಪೂರ್ಣವಾಗಿ ಹೊಸ ಪರೀಕ್ಷೆಯಾಗಿದೆ. ದಕ್ಷಿಣ ಆಫ್ರಿಕಾ ಅಥವಾ ಐಪಿಎಲ್ ತಂಡಗಳಲ್ಲಿ ಆಡಲೂ ಈ ಹಿಂದೆಯೇ ಇಲ್ಲಿಗೆ ಬಂದು ಹೋಗಿದ್ದೆ. ಇದೀಗ ಕೋಚ್ ಆಗಿ ಹೊಸ ಪಾತ್ರವಹಿಸುವುದಕ್ಕೆ ಉತ್ಸಾಹವನ್ನುಂಟು ಮಾಡಿದೆ. ನಾನೀಗ ಮೈದಾನಕ್ಕಿಳಿಯಲು ಸಿದ್ಧನಿದ್ದೇನೆ”, ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.
ಸ್ಟೇಯ್ನ್ ಅವರು ಈ ಹಿಂದೆ ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರಿಂದ ಬಹುತೇಕ ಆಟಗಾರರ ದುರ್ಬಲತೆಯ ಬಗ್ಗೆ ಅರಿತುಕೊಂಡಿದ್ದಾರೆ. ಇದರ ಪ್ರಯೋಜವನ್ನು ಹೈದರಾಬಾದ್ ಪಡೆದುಕೊಳ್ಳುವುದು ಖಚಿತ. ಡೇಲ್ ಸ್ಟೇನ್ 95 ಪಂದ್ಯಗಳಿಂದ 97 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಪರ 93 ಟೆಸ್ಟ್, 125 ಏಕದಿನ ಮತ್ತು 47 ಟಿ20 ಪಂದ್ಯಗಳಿಂದ 699 ವಿಕೆಟ್ ಪಡೆದು ಬೆಟ್ಟದಷ್ಟು ಅನುಭವ ಹೊಂದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ನಿಕೋಲಸ್ ಪೂರನ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಪ್ರಿಯಮ್ ಗರ್ಗ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ, ರೊಮಾರಿಯೊ ಶೆಫರ್ಡ್, ಶಶಾಂಕ್ ಸಿಂಗ್, ಸೌರಭ್ ದುಬೆ, ವಿಷ್ಣು ವಿನೋದ್, ಶೇನ್ ಅಬಾಟ್, ಆರ್ ಸಮರ್ಥ್.
IPL 2022: ವಿರಾಟ್ ಕೊಹ್ಲಿ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ ಗ್ಲೆನ್ ಮ್ಯಾಕ್ಸ್ವೆಲ್