ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs South Africa) ತಂಡ ಹೀನಾಯ ಸೋಲು ಕಂಡಿದೆ. ಬೆಟ್ಟದಂತಹ ಟಾರ್ಗೆಟ್ ನೀಡಿದ್ದರೂ ಬೌಲರ್ಗಳ ಕಳಪೆ ಪ್ರದರ್ಶನದಿಂದ ಟೀಮ್ ಇಂಡಿಯಾ (Team India) ವಿಶ್ವ ದಾಖಲೆ ನಿರ್ಮಿಸುವ ಅವಕಾಶವನ್ನೂ ಕೈಚೆಲ್ಲಿಕೊಂಡಿತು. ರಸ್ಸಿ ವಂಡರ್ ಡುಸ್ಸೆನ್ ಹಾಗೂ ಡೇವಿಡ್ ಮಿಲ್ಲರ್ (David Miller) ಸ್ಫೋಟಕ ಬ್ಯಾಟಿಂಗ್ಗೆ ತಬ್ಬಿಬ್ಬಾದ ಭಾರತ ರಿಷಭ್ ಪಂತ್ ನಾಯಕತ್ವದ ಮೊದಲ ಪಂದ್ಯದಲ್ಲೇ ಗೆಲ್ಲಲು ವಿಫಲವಾಯಿತು. ಅನುಭವಿಗಳಾದ ಭುವಿ, ಚಹಲ್ ಬೌಲಿಂಗ್ ಮ್ಯಾಜಿಕ್ ಕೂಡ ಈ ಪಂದ್ಯದಲ್ಲಿ ನಡೆಯಲಿಲ್ಲ. ಬಹುತೇಕ ಎಲ್ಲ ಬೌಲರ್ಗಳು ದುಬಾರಿಯಾದರು. 7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನ ಕನಸಿಗೆ ತಣ್ಣೀರನ್ನು ಎರಚಿತು.
ಟೀಮ್ ಇಂಡಿಯಾ ಈ ಪಂದ್ಯಕ್ಕೂ ಮುನ್ನ ಕಳೆದ 12 ಟಿ20 ಪಂದ್ಯಗಳನ್ನು ಸತತವಾಗಿ ಗೆದ್ದಿತ್ತು. ಹೀಗಾಗಿ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಕಂಡಿದ್ದರೆ ಸತತವಾಗಿ 13 ಟಿ20 ಪಂದ್ಯಗಳಲ್ಲಿ ಗೆಲುವು ಕಂಡ ಮೊದಲ ತಂಡ ಎಂಬ ವಿಶ್ವ ದಾಖಲೆ ಬರೆಯುವ ಅವಕಾಶವಿತ್ತು. ಆದರೆ, ಈ ಪಂದ್ಯದಲ್ಲಿ ಸೋತಿರುವ ಭಾರತ ಈ ಅವಕಾಶವನ್ನು ಕೈತಪ್ಪಿಸಿಕೊಂಡು ನಿರಾಸೆ ಅನುಭವಿಸಿದೆ. ಈ ಮೂಲಕ ಅಪ್ಘಾನಿಸ್ತಾನ, ರೋಮಾನಿಯಾ ದೇಶಗಳ ನಂತರ ಸತತ 12 ಟಿ20 ಪಂದ್ಯಗಳಲ್ಲಿ ಗೆದ್ದ ದೇಶ ಭಾರತ ಎಂಬ ಮೈಲಿಗಲ್ಲಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.
India vs South Africa, 1st T20: ಮಿಂಚಿದ ಕಿಲ್ಲರ್ ಮಿಲ್ಲರ್, ಡೇಂಜರಸ್ ಡುಸ್ಸೆನ್: ಸೌತ್ ಆಫ್ರಿಕಾಗೆ ಭರ್ಜರಿ ಜಯ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಪವರ್ ಪ್ಲೇಯನ್ನು ಸಂಪೂರ್ಣವಾಗಿ ಆಡಿದ ಈ ಜೋಡಿ 57 ರನ್‌ಗಳ ಜತೆಯಾಟವಾಡಿತು. ರುತುರಾಜ್ ಗಾಯಕ್ವಾಡ್ 23 ರನ್ ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 48 ಎಸೆತಗಳಲ್ಲಿ 76 ರನ್ ಚಚ್ಚಿದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 27 ಎಸೆತಗಳಲ್ಲಿ 36 ರನ್ ಕಲೆಹಾಕಿದರೆ, ನಾಯಕ ರಿಷಭ್ ಪಂತ್ 16 ಎಸೆತಗಳಲ್ಲಿ 29 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಕೇವಲ 12 ಎಸೆತಗಳಲ್ಲಿ ಅಜೇಯ 31 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ 1 ರನ್ ಕಲೆಹಾಕಿದರು. ಪರಿಣಾಮ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಆಫ್ರಿಕಾ ಪರ ಮಹರಾಜ್, ನಾರ್ಟ್ಜೆ, ಪಾರ್ನೆಲ್ ಹಾಗೂ ಪ್ರೆಟೋರಿಯಸ್ ತಲಾ 1 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲಿ ನಾಯಕ ತೆಂಬಾ ಬವುಮ (10) ವಿಕೆಟ್ ಕಳೆದುಕೊಂಡಿತು. ಡಿ ಕಾಕ್ (22) ಮತ್ತು ಪ್ರಿಟೋರಿಯಸ್ (29) ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದರೆ, ಇವರ ನಿರ್ಗಮನದ ಬಳಿಕ ಜತೆಗೂಡಿದ ಡೇವಿಡ್ ಮಿಲ್ಲರ್ ಮತ್ತು ಡುಸೆನ್ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನವಿತ್ತರು. 6 ಓವರ್‌ಗಳಿಂದ 80 ರನ್, 3 ಓವರ್‌ಗಳಿಂದ 34 ರನ್ ತೆಗೆಯುವ ಸವಾಲನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದರು. ಕೊನೆಯ 2 ಓವರ್‌ಗಳಲ್ಲಿ ಈ ಟಾರ್ಗೆಟ್ ಕೇವಲ 12 ರನ್ನಿಗೆ ಇಳಿದದ್ದು ಇವರಿಬ್ಬರ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿ. ಈ ಜೋಡಿ ಕೇವಲ 64 ಎಸೆತಗಳಿಂದ 131 ರನ್ ಸೂರೆಗೈದಿತು.
ಐಪಿಎಲ್ ಫಾರ್ಮ್ ಮುಂದುವರಿಸಿದ ಮಿಲ್ಲರ್ 31 ಎಸೆತಗಳಿಂದ ಅಜೇಯ 64 ರನ್ ಹೊಡೆದರೆ (4 ಬೌಂಡರಿ, 5 ಸಿಕ್ಸರ್), ಡುಸೆನ್ 46 ಎಸೆತ ನಿಭಾಯಿಸಿ ಸರ್ವಾಧಿಕ 75 ರನ್ ಬಾರಿಸಿದರು (7 ಬೌಂಡರಿ, 5 ಸಿಕ್ಸರ್). ಪರಿಣಾಮ ಆಫ್ರಿಕಾ 19.1 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 212 ರನ್ ಚಚ್ಚಿತು. ಇದು ಟಿ20 ಕ್ರಿಕೆಟ್ನಲ್ಲಿ ಆಫ್ರಿಕಾ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.