
ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಇದರ ನಡುವೆ ತಂಡದ ಪ್ರಮುಖ ಆಟಗಾರ ಡೇವಿಡ್ ವಿಲ್ಲಿ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಇಂಗ್ಲೆಂಡ್ ತಂಡದ ಪ್ರಮುಖ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ವಿಲ್ಲಿ, ಈ ಬಾರಿಯ ವಿಶ್ವಕಪ್ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ.
ನಾನು ಬಾಲ್ಯದಿಂದಲೂ ಇಂಗ್ಲೆಂಡ್ ಪರ ಆಡಬೇಕೆಂಬ ಕನಸು ಕಂಡಿದ್ದೆ. ಈ ಕನಸುಗಳು ಈಡೇರಿವೆ. ಇದೀಗ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಿದೆ. ಅದರಂತೆ ವಿಶ್ವಕಪ್‌ನ ಕೊನೆಯಲ್ಲಿ ನಾನು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಡೇವಿಡ್ ವಿಲ್ಲಿ ತಿಳಿಸಿದ್ದಾರೆ.
ಅದರಂತೆ ಈ ಬಾರಿಯ ವಿಶ್ವಕಪ್ನಲ್ಲಿ ಪಾಕಿಸ್ತಾನ್ ವಿರುದ್ಧ ನಡೆಯಲಿರುವ ಪಂದ್ಯವು ಡೇವಿಡ್ ವಿಲ್ಲಿ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆಯಿದೆ. ಈ ಮೂಲಕ 33 ವರ್ಷದ ಎಡಗೈ ಆಲ್ರೌಂಡರ್ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
2015 ರಲ್ಲಿ ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಿದ್ದ ಡೇವಿಡ್ ವಿಲ್ಲಿ 70 ಏಕದಿನ ಪಂದ್ಯಗಳಿಂದ 627 ರನ್ ಕಲೆಹಾಕಿದ್ದಾರೆ. ಹಾಗೆಯೇ 94 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ 43 ಪಂದ್ಯಗಳಿಂದ 226 ರನ್ ಹಾಗೂ 51 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?
ಇದೀಗ 8 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕೆರಿಯರ್ಗೆ ವಿದಾಯ ಹೇಳಲು ನಿರ್ಧರಿಸಿರುವ ಡೇವಿಡ್ ವಿಲ್ಲಿ ಟಿ20 ಲೀಗ್ನಲ್ಲಿ ಮುಂದುವರೆಯಬಹುದು. ಅದರಲ್ಲೂ ಐಪಿಎಲ್ನಲ್ಲಿ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ವಿಲ್ಲಿ ಮುಂಬರುವ ಸೀಸನ್ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
Published On - 4:07 pm, Wed, 1 November 23