ಅಬುದಾಬಿ ಟಿ10 ಲೀಗ್​ ಗೆದ್ದ ರೈನಾ ತಂಡ; ಟಿ20 ವಿಶ್ವಕಪ್ ಫ್ಲಾಪ್ ಸ್ಟಾರ್​ಗಳೇ ಇಲ್ಲಿ ಸೂಪರ್ ಸ್ಟಾರ್ಸ್​..!

| Updated By: ಪೃಥ್ವಿಶಂಕರ

Updated on: Dec 05, 2022 | 1:30 PM

Abu Dhabi T10: ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್‌ ತಂಡ ನಿಗದಿತ 10 ಓವರ್‌ಗಳಲ್ಲಿ 128 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿಬೆನ್ನಟ್ಟಿದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡ 10 ಓವರ್‌ಗಳಲ್ಲಿ ಕೇವಲ 91 ರನ್ ಗಳಿಸಲಷ್ಟೇ ಶಕ್ತವಾಗಿ 37 ರನ್​ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಅಬುದಾಬಿ ಟಿ10 ಲೀಗ್​ ಗೆದ್ದ ರೈನಾ ತಂಡ; ಟಿ20 ವಿಶ್ವಕಪ್ ಫ್ಲಾಪ್ ಸ್ಟಾರ್​ಗಳೇ ಇಲ್ಲಿ ಸೂಪರ್ ಸ್ಟಾರ್ಸ್​..!
Abu Dhabi t10
Follow us on

ಅಬುಧಾಬಿಯಲ್ಲಿ ನಡೆದ ಕ್ರಿಕೆಟ್‌ನ ಅತ್ಯಂತ ಕಡಿಮೆ ಮಾದರಿಯ (ಅನಧಿಕೃತ) ಈ ವಿಶೇಷ ಲೀಗ್‌ನ (Abu Dhabi t10) ಫೈನಲ್‌ನಲ್ಲಿ ನಿಕೋಲಸ್ ಪೂರನ್ (Nicholas Pooran) ನಾಯಕತ್ವದ ಡೆಕ್ಕನ್ ಗ್ಲಾಡಿಯೇಟರ್ಸ್‌ ತಂಡ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವನ್ನು ಮಣಿಸಿ (Deccan Gladiators beats New York strikers ) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್‌ ತಂಡ ನಿಗದಿತ 10 ಓವರ್‌ಗಳಲ್ಲಿ 128 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿಬೆನ್ನಟ್ಟಿದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡ 10 ಓವರ್‌ಗಳಲ್ಲಿ ಕೇವಲ 91 ರನ್ ಗಳಿಸಲಷ್ಟೇ ಶಕ್ತವಾಗಿ 37 ರನ್​ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಮಿಂಚಲಿಲ್ಲ ರೈನಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಭಾರತದ ಮಾಜಿ ಆಟಗಾರ ಸುರೇಶ್ ರೈನಾ 5 ಎಸೆತಗಳಲ್ಲಿ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾದರು. ಅವರ ಸಹ ಆರಂಭಿಕ ಆಟಗಾರ ಟಾಮ್ ಕೊಹ್ಲರ್ ಕಾಡ್ಮೋರ್ ಕೂಡ ಬೇಗನೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಆಂಡ್ರೆ ರಸೆಲ್ ಕೂಡ ಕೇವಲ 9 ರನ್ ಗಳಿಸಿ ಬ್ಯಾಟ್ ಬದಿಗಿಟ್ಟರು.

ಹೀಗಾಗಿ ಡೆಕ್ಕನ್ ಗ್ಲಾಡಿಯೇಟರ್ಸ್‌ ತಂಡ 5 ಓವರ್ ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು 54 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ನಾಯಕ ಪೂರನ್ ಹಾಗೂ ವಿಸಾ ತಂಡದವನ್ನು ಸಂಕಷ್ಟದಿಂದ ಪಾರು ಮಾಡಿದರು. ಇಬ್ಬರೂ ಸೇರಿಕೊಂಡು ಮುಂದಿನ 5 ಓವರ್‌ಗಳಲ್ಲಿ ನ್ಯೂಯಾರ್ಕ್‌ನ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಕೇವಲ 5 ಓವರ್‌ಗಳಲ್ಲಿ 74 ರನ್​ಗಳ ಜೊತೆಯಾಟ ಆಡಿ ಅಂತಿಮ 10 ಓವರ್​ಗಳ ಮುಕ್ತಾಯಕ್ಕೆ ತಂಡವನ್ನು 128 ರನ್‌ಗಳಿಗೆ ಕೊಂಡೊಯ್ದರು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಪೂರನ್ (40 ರನ್, 23 ಎಸೆತ, 5 ಬೌಂಡರಿ, 1 ಸಿಕ್ಸರ್) ಔಟಾದರೆ, ವಿಸಾ (43 ರನ್, 18 ಎಸೆತ, 2 ಬೌಂಡರಿ, 4 ಸಿಕ್ಸರ್) ಅಜೇಯರಾಗಿ ಉಳಿದರು.

ಇದನ್ನೂ ಓದಿ: 2022ರಲ್ಲಿ ಬರೋಬ್ಬರಿ 20 ಪಂದ್ಯಗಳಲ್ಲಿ ಭಾರತಕ್ಕೆ ಸೋಲು! ಮರುಕಳಿಸುತ್ತಾ 2015ರ ಇತಿಹಾಸ..?

ಪೊಲಾರ್ಡ್‌ ಇಂಜುರಿ, ನ್ಯೂಯಾರ್ಕ್‌ಗೆ ಸೋಲು

ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ನ್ಯೂಯಾರ್ಕ್ ತಂಡ ಅತ್ಯಂತ ಕಳಪೆ ಆರಂಭ ಪಡೆಯಿತು. ತಂಡದ ಮೂರು ವಿಕೆಟ್​ಗಳು ಕೇವಲ 13 ರನ್​ಗಳಿಗೆ ಉದುರಿದವು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಅಜಂ ಖಾನ್ 16 ರನ್​ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ವೆಸ್ಟ್ ಇಂಡೀಸ್‌ನ ಮಾಜಿ ಅನುಭವಿ ಆಲ್‌ರೌಂಡರ್ ಮತ್ತು ತಂಡದ ನಾಯಕ ಕೀರನ್ ಪೊಲಾರ್ಡ್ (23 ರನ್) ಹಾಗೂ ಥಾಂಪ್ಸನ್ (ಅಜೇಯ 22 ರನ್) ತಂಡವನ್ನು ಮುಜುಗರದ ಸೋಲಿನಿಂದ ಹೊರತಂದರು. ಈ ವೇಳೆ ನಾಯಕ ಪೋಲಾರ್ಡ್​ ಇಂಜುರಿಗೊಂಡು ಕ್ರೀಸ್​ನಿಂದ ಹೊರನಡೆಯಬೇಕಾಯಿತು. ಹೀಗಾಗಿ ನ್ಯೂಯಾರ್ಕ್ ತಂಡ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 91 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಡೆಕ್ಕನ್ ತಂಡ 37 ರನ್​ಗಳ ದೊಡ್ಡ ಅಂತರದಿಂದ ಪ್ರಶಸ್ತಿ ಗೆದ್ದುಕೊಂಡಿತು.

ವಿಶ್ವಕಪ್‌ನಲ್ಲಿ ನಿರಾಸೆ ಮೂಡಿಸಿದ್ದ ಪೂರನ್

ಅಬುದಾಬಿ ಟಿ10 ಲೀಗ್​ನಲ್ಲಿ ಅಬ್ಬರದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದ ನಿಕೋಲಸ್ ಪೂರನ್ ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದರು. ಅದರಲ್ಲೂ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದ ಪೂರನ್ ತಮ್ಮ ತಂಡವನ್ನು ಮೊದಲ ಸುತ್ತಿನ ಆಚೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ಪೂರನ್​ರನ್ನು ಐಪಿಎಲ್​ನಲ್ಲೂ ಹೈದರಾಬಾದ್ ಫ್ರಾಂಚೈಸಿ ತಂಡದಿಂದ ಹೊರಹಾಕಿತ್ತು. ಇದೀಗ ಭರ್ಜರಿ ಫಾರ್ಮ್​ಗೆ ಬಂದಿರುವ ಪೂರನ್​ರನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Mon, 5 December 22