ಜುಲೈ 24 ರಿಂದ ಆರಂಭವಾಗಲಿರುವ ದೇಶೀ ಏಕದಿನ ಟೂರ್ನಿ ದೇವಧರ್ ಟ್ರೋಫಿ (Deodhar Trophy 2023) ಪಂದ್ಯಾವಳಿಗೆ 15 ಸದಸ್ಯರ ದಕ್ಷಿಣ ವಲಯ (South Zone) ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಅರ್ಜುನ್ ತೆಂಡೂಲ್ಕರ್ (Arjun Tendulkar) ಸ್ಥಾನ ಪಡೆದಿದ್ದು, 50 ಓವರ್‌ಗಳ ಪಂದ್ಯಾವಳಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಉತ್ತರ ವಲಯ ಮತ್ತು ಪಶ್ಚಿಮ ವಲಯದ ತಂಡಗಳನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಉತ್ತರ ವಲಯದ (North Zone) ನಾಯಕತ್ವ ನಿತೀಶ್ ರಾಣಾ (Nitish Rana) ಕೈ ಸೇರಿದ್ದರೆ, ಪಶ್ಚಿಮ ವಲಯ (West Zone) ತಂಡವನ್ನು ಪ್ರಿಯಾಂಕ್ ಪಾಂಚಾಲ್ (Priyank Panchal) ಮುನ್ನಡೆಸಲಿದ್ದಾರೆ.
ಇನ್ನು ದಕ್ಷಿಣ ವಲಯ ತಂಡದ ಬಗ್ಗೆ ಹೇಳುವುದಾದರೆ, ರಣಜಿ ಟ್ರೋಫಿಯಲ್ಲಿ ಗೋವಾ ಮತ್ತು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಅರ್ಜುನ್ ತೆಂಡೂಲ್ಕರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ಇವರನ್ನು ಹೊರತುಪಡಿಸಿ ತಂಡದಲ್ಲಿ ಹೆಚ್ಚಿನವರು ಅನ್‌ಕ್ಯಾಪ್ ಆಟಗಾರರಾಗಿರುವುದು ವಿಶೇಷ. ಕಳೆದ ಬಾರಿಯ ರಣಜಿ ಸೀಸನ್ನಲ್ಲಿ ಗೋವಾ ಪರ ಕಣಕ್ಕಿಳಿದಿದ್ದ ಅರ್ಜುನ್ ತೆಂಡೂಲ್ಕರ್ ತಮ್ಮ ರಣಜಿ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಆದರೆ ಆ ನಂತರ ಅವರ ಬ್ಯಾಟ್‌ನಿಂದ ಯಾವುದೇ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಹೊರಬಂದರಿಲಿಲ್ಲ. 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅರ್ಜುನ್ 223 ರನ್ ಕಲೆಹಾಕಿದ್ದರೆ, ಬೌಲಿಂಗ್ನಲ್ಲಿ 12 ವಿಕೆಟ್ ಪಡೆದಿದ್ದಾರೆ.
Duleep Trophy: ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ ಪ್ರಕಟ; ಮಯಾಂಕ್ಗೆ ಉಪನಾಯಕತ್ವ
ಏತನ್ಮಧ್ಯೆ, ತಂಡದಲ್ಲಿ ನಾಲ್ಕು ವೇಗಿಗಳು ಮತ್ತು ನಾಲ್ಕು ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿದೆ. ಅರ್ಜುನ್, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್‌ಕುಮಾರ್ ಮತ್ತು ವಿ ಕೌಶಿಕ್ ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಲ್ಲಿದ್ದು, ವಾಷಿಂಗ್ಟನ್ ಸುಂದರ್, ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್ ಮತ್ತು ಸಾಯಿ ಕಿಶೋರ್ ಸ್ಪಿನ್ ವಿಭಾಗವನ್ನು ನಿರ್ವಹಿಸಲಿದ್ದಾರೆ.
ದಕ್ಷಿಣ ವಲಯ ತನ್ನ ತಂಡವನ್ನು ಪ್ರಕಟಿಸುವ ಮುನ್ನವೇ ಉತ್ತರ ವಲಯ ಮತ್ತು ಪಶ್ಚಿಮ ವಲಯದ ತಂಡಗಳು ಪ್ರಕಟಗೊಂಡಿದ್ದವು. ಉತ್ತರ ವಲಯ ತಂಡದಲ್ಲಿ ನಿತೀಶ್ ರಾಣಾಗೆ ನಾಯಕನ ಪಾತ್ರವನ್ನು ನೀಡಲಾಗಿದ್ದು, ಪ್ರಿಯಾಂಕ್ ಪಾಂಚಾಲ್ ಪಶ್ಚಿಮ ವಲಯವನ್ನು ಮುನ್ನಡೆಸಲಿದ್ದಾರೆ. ಉತ್ತರ ವಲಯ ತಂಡವು ಯುವ ಉದಯೋನ್ಮುಖ ಆಟಗಾರರಾದ ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್, ನಿಶಾಂತ್ ಸಿಂಧು ಮತ್ತು ಹರ್ಷಿತ್ ರಾಣಾ ಮುಂತಾದವರನ್ನು ಒಳಗೊಂಡಿದೆ.
ಹಾಗೆಯೇ ಪಶ್ಚಿಮ ವಲಯ ತಂಡದಲ್ಲಿ ಸನ್ರೈಸರ್ಸ್ ಹೈದರಾಬಾದ್ ಆಟಗಾರ ರಾಹುಲ್ ತ್ರಿಪಾಠಿ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೃಥ್ವಿ ಶಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟರ್ ಶಿವಂ ದುಬೆ ಸ್ಥಾನ ಪಡೆದಿದ್ದಾರೆ.
ದಕ್ಷಿಣ ವಲಯ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರೋಹನ್ ಕುನ್ನುಮ್ಮಲ್ (ಉಪನಾಯಕ), ಎನ್ ಜಗದೀಸನ್ (ವಿಕೆಟ್ ಕೀಪರ್), ರೋಹಿತ್ ರಾಯಡು, ಕೆಬಿ ಅರುಣ್ ಕಾರ್ತಿಕ್, ದೇವದತ್ ಪಡಿಕ್ಕಲ್, ರಿಕಿ ಭುಯಿ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್‌ಕುಮಾರ್, ಕೌಶಿಕ್ ವಿ , ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್, ಅರ್ಜುನ್ ತೆಂಡೂಲ್ಕರ್, ಸಾಯಿ ಕಿಶೋರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ