ಬಿಸಿಸಿಐ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ

Devajit Saikia: ದೇವಜಿತ್ ಸೈಕಿಯಾ ಸೈಕಿಯಾ ಅಸ್ಸಾಂ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್. ಪ್ರಥಮ ದರ್ಜೆಯಲ್ಲಿ 4 ಪಂದ್ಯಗಳನ್ನಾಡಿದ್ದ ಅವರು ಒಟ್ಟು 53 ರನ್ ಕಲೆಹಾಕಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿಯ ಹಂಗಾಮಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಬಿಸಿಸಿಐ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
Jay Shah - Devajit Saikia

Updated on: Dec 10, 2024 | 10:04 AM

ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆಯಾಗಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತೆರವಾಗಿದ್ದ ಈ ಹುದ್ದೆಗೆ ಸೈಕಿಯಾ ಅವರನ್ನು ನೇಮಿಸಲಾಗಿದೆ. ಅಸ್ಸಾಂ ಮೂಲದ ಸೈಕಿಯಾ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ. ಪ್ರಸ್ತುತ ಅವರು ಬಿಸಿಸಿಐ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು, ಬಿಸಿಸಿಐ ಸಂವಿಧಾನದ ಷರತ್ತು 7(1) (ಡಿ) ನಿಯಮದಡಿಯಲ್ಲಿ ದೇವಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾನ್ನಾಗಿ ಆಯ್ಕೆ ಮಾಡಿದ್ದಾರೆ.

ಬಿಸಿಸಿಐನ ಖಾಲಿ ಹುದ್ದೆ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ಇನ್ನೊಬ್ಬ ಪದಾಧಿಕಾರಿಯನ್ನು ನಿಯೋಜಿಸಿಕೊಳ್ಳಲು ಬಿಸಿಸಿಐ ಅಧ್ಯಕ್ಷರಿಗೆ ಅಧಿಕಾರವಿದೆ. ಈ ಅಧಿಕಾರದಂತೆ ಯಾವುದೇ ಚುನಾವಣೆಯಿಲ್ಲದೆ, ರೋಜರ್ ಬಿನ್ನಿ ಅವರು ಸೈಕಿಯಾ ಅವರನ್ನು ಆಯ್ಕೆ ಮಾಡಿದ್ದಾರೆ.

ಅದರಂತೆ ಬಿಸಿಸಿಐ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಖಾಯಂ ಕಾರ್ಯದರ್ಶಿಯನ್ನು ನೇಮಿಸುವವರೆಗೆ ಸೈಕಿಯಾ ಅವರು ಹಂಗಾಮಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಖಾಲಿ ಹುದ್ದೆಯನ್ನು ಶಾಶ್ವತವಾಗಿ ಭರ್ತಿ ಮಾಡುವವರೆಗೆ, ಅಂದರೆ ಮುಂದಿನ ವರ್ಷದ ಸೆಪ್ಟೆಂಬರ್‌ವರೆಗೆ ದೇವಜಿತ್ ಸೈಕಿಯಾ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ಐಸಿಸಿಗೆ ಜಯ್ ಶಾ ಬಾಸ್:

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಕಾರ್ಯಾರಂಭ ಮಾಡಿದ್ದಾರೆ. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಜಯ್ ಶಾ ಈ ಬಾರಿಯ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಅವರಿಗೆ ಪ್ರತಿಸ್ಫರ್ಧಿಯಾಗಿ ಯಾರು ಸಹ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 27) ಅಧಿಕೃತವಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಝಿಂಬಾಬ್ವೆ ಪರ ಕಣಕ್ಕಿಳಿಯಲಿದ್ದಾರೆ ಕರನ್ ಸಹೋದರ

ಈ ಹಿಂದೆ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿದಿದ್ದು, ಡಿಸೆಂಬರ್ 1 ರಿಂದ ಜಯ್ ಶಾ ಅವರು ನೂತನ ಅಧ್ಯಕ್ಷರಾಗಿ ಕಾರ್ಯಾರಂಭ ಮಾಡಿದ್ದಾರೆ. ಹೀಗಾಗಿ ಇತ್ತ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ದೇವಜಿತ್ ಸೈಕಿಯಾ ಅವರನ್ನು ನೇಮಿಸಲಾಗಿದೆ.