ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ನಲ್ಲಿ ಸೌತ್ ಆಫ್ರಿಕಾ ತಂಡ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆದ್ದರೆ ಆಫ್ರಿಕನ್ನರು WTC ಫೈನಲ್ ಆಡುವುದು ಕನ್ಫರ್ಮ್ ಆಗಲಿದೆ.
ಸೌತ್ ಅಫ್ರಿಕಾ ತಂಡವು ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಪಾಕಿಸ್ತಾನ್ ವಿರುದ್ಧ ಆಡಲಿದ್ದು, 2 ಪಂದ್ಯಗಳ ಸರಣಿಯಲ್ಲಿ ಒಂದು ಮ್ಯಾಚ್ ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಎರಡೂ ಟೆಸ್ಟ್‌ಗಳು ಡ್ರಾಗೊಂಡರೆ ಸೌತ್ ಆಫ್ರಿಕಾ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
ಇತ್ತ ಭಾರತ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಬೇಕಿದ್ದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಬೇಕು. ಈ ಮೂಲಕ 4-1 ಅಂತರದಿಂದ ಗೆದ್ದು ಆಸ್ಟ್ರೇಲಿಯಾ ತಂಡವನ್ನು ಫೈನಲ್ನಿಂದ ಹೊರಗಿಡಬಹುದು. ಹೀಗಾದಲ್ಲಿ ಫೈನಲ್ನಲ್ಲಿ ಸೌತ್ ಆಫ್ರಿಕಾ ಮತ್ತು ಭಾರತ ಮುಖಾಮುಖಿಯಾಗಲಿದೆ.
ಸದ್ಯ ಮೂರು ತಂಡಗಳು ಫೈನಲ್ ರೇಸ್ನಲ್ಲಿದ್ದು, ಅದರಂತೆ ಸೌತ್ ಆಫ್ರಿಕಾ ತಂಡಕ್ಕೆ ಒಂದು ಗೆಲುವಿನ ಅಗತ್ಯವಿದ್ದರೆ, ಆಸ್ಟ್ರೇಲಿಯಾ ತಂಡಕ್ಕೆ 2 ಗೆಲುವುಗಳ ಅಗತ್ಯತೆಯಿದೆ. ಅತ್ತ ಟೀಮ್ ಇಂಡಿಯಾ ಮೂರು ಜಯ ಸಾಧಿಸಿದರೆ ಮಾತ್ರ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು.
ಪ್ರಸ್ತುತ ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡವು 63.33% ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 60.71% ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಇನ್ನು 57.29%ಅಂಕಗಳೊಂದಿಗೆ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಹಾಗೆಯೇ 45.45% ಅಂಕಗಳನ್ನು ಹೊಂದಿರುವ ಶ್ರೀಲಂಕಾ ತಂಡವು ನಾಲ್ಕನೇ ಸ್ಥಾನದಲ್ಲಿದ್ದು, ಮೂರು ತಂಡಗಳ ಫಲಿತಾಂಶಗಳಲ್ಲಿ ಮಹತ್ವದ ಬದಲಾವಣೆಯಾದರೆ ಮಾತ್ರ ಲಂಕಾ ತಂಡಕ್ಕೆ ಫೈನಲ್ಗೆ ಪ್ರವೇಶಿಸಲು ಅವಕಾಶ ದೊರೆಯಲಿದೆ.
Published On - 8:54 am, Tue, 10 December 24