VHT 2025-26: ಕರುಣ್, ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ಸತತ 2ನೇ ಜಯ

Vijay Hazare Trophy: ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿನ ಹಿನ್ನಡೆಯ ನಂತರ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಬಲಿಷ್ಠ ಜಾರ್ಖಂಡ್‌ ವಿರುದ್ಧ 412 ರನ್‌ ಬೆನ್ನಟ್ಟಿ ಗೆದ್ದ ತಂಡ, ನಂತರ ಕೇರಳ ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ದೇವದತ್ ಪಡಿಕ್ಕಲ್‌ ಮತ್ತು ಕರುಣ್ ನಾಯರ್ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ.

VHT 2025-26: ಕರುಣ್, ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ಸತತ 2ನೇ ಜಯ
Karun, Padikkal

Updated on: Dec 26, 2025 | 5:58 PM

ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಎಡವಿದ್ದ ಕರ್ನಾಟಕ ತಂಡ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ( Vijay Hazare Trophy) ಭರ್ಜರಿ ಪ್ರದರ್ಶನ ನೀಡುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಜಾರ್ಖಂಡ್ ನೀಡಿದ್ದ 412 ರನ್​ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿ ಗೆದ್ದ ಕರ್ನಾಟಕ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ 8ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ದೇವದತ್ ಪಡಿಕ್ಕಲ್‌ (Devdutt Padikkal), ಈ ಪಂದ್ಯದಲ್ಲೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೇರಳ ತಂಡ 284 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 10 ಎಸೆತಗಳು ಬಾಕಿ ಇರುವಂತೆಯೇ ಜಯ ದಾಖಲಿಸಿತು. ಕರ್ನಾಟಕ ಪರ ಮಿಂಚಿದ ಪಡಿಕ್ಕಲ್ 124 ರನ್​ಗಳ ಇನ್ನಿಂಗ್ಸ್ ಆಡಿದರೆ, ಕರುಣ್ ನಾಯರ್ (Karun Nair) ಕೂಡ ಅಜೇಯ 130 ರನ್ ಬಾರಿಸಿದರು.

285 ರನ್​ಗಳ ಗುರಿ ನೀಡಿದ ಕೇರಳ

ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲ ಪಂದ್ಯದಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಕರ್ನಾಟಕದ ಬೌಲರ್​ಗಳು ಈ ಪಂದ್ಯದಲ್ಲಿ ಕೇರಳದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಿದರು. ಹೀಗಾಗಿ ತಂಡದ ಮೊದಲ ನಾಲ್ವರು ಬ್ಯಾಟ್ಸ್‌ಮನ್​ಗಳಿಗೆ ಬಿಗ್ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಆದಾಗ್ಯೂ 5ನೇ ಕ್ರಮಾಂಕದಲ್ಲಿ ಬಂದ ಅನುಭವಿ ಬ್ಯಾಟ್ಸ್‌ಮನ್ ಬಾಬಾ ಅಪರಾಜಿತ್ 71 ರನ್​ಗಳ ಇನ್ನಿಂಗ್ಸ್ ಆಡಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಜರುದ್ಧೀನ್ ಅತ್ಯಧಿಕ 84 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ವಿಷ್ಣು ವಿನೋದ್ 35 ರನ್​ಗಳ ಕೊಡುಗೆ ನೀಡಿದರೆ, ನಿದೀಶ್ 34 ರನ್ ಬಾರಿಸಿದರು. ಇವರ ಆಟದಿಂದಾಗಿ ಕೇರಳ ತಂಡ 284 ರನ್ ಕಲೆಹಾಕಿತು. ಇತ್ತ ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮಿಂಚಿದ ಅಭಿಲಾಶ್ ಶೆಟ್ಟಿ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.

ಕರುಣ್, ಪಡಿಕ್ಕಲ್ ಶತಕ

ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್ ಅಗರ್ವಾಲ್ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ದಾಖಲೆಯ ಜೊತೆಯಾಟ ಕಟ್ಟಿದರು. ಇವರಿಬ್ಬರು 2ನೇ ವಿಕೆಟ್​ಗೆ 223 ರನ್​ ಸೇರಿಸಿದರು. ಈ ವೇಳೆ ಇಬ್ಬರು ಶತಕ ಸಿಡಿಸಿ ಮಿಂಚಿದರು.

IND vs AUS: ಆಸ್ಟ್ರೇಲಿಯಾ ವಿರುದ್ಧ 150 ರನ್ ಚಚ್ಚಿದ ಕನ್ನಡಿಗ ದೇವದತ್ ಪಡಿಕ್ಕಲ್‌

ಮೊದಲ ಪಂದ್ಯದಲ್ಲಿ 147 ರನ್​ ಬಾರಿಸಿದ್ದ ದೇವದತ್ ಪಡಿಕ್ಕಲ್‌, ಎರಡನೇ ಪಂದ್ಯದಲ್ಲೂ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 137 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 3 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳ ಸಹಿತ 124 ರನ್ ಬಾರಿಸಿದರು. ಪಡಿಕ್ಕಲ್​ಗೆ ಸಾಥ್ ನೀಡಿದ ಅನುಭವಿ ಕರುಣ್ ನಾಯರ್ ಕೂಡ 130 ಎಸೆತಗಳಲ್ಲಿ 14 ಬೌಂಡರಿ ಸಹಿತ ಅಜೇಯ 130 ರನ್ ಬಾರಿಸಿದರು. ಪಡಿಕ್ಕಲ್ ಔಟಾದ ಬಳಿಕ ಬಂದ ಸ್ಮರಣ್ ರವಿಚಂದ್ರನ್ 25 ರನ್​ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Fri, 26 December 25