IND vs AUS: ಆಸ್ಟ್ರೇಲಿಯಾ ವಿರುದ್ಧ 150 ರನ್ ಚಚ್ಚಿದ ಕನ್ನಡಿಗ ದೇವದತ್ ಪಡಿಕ್ಕಲ್
Devdutt Padikkal century: ಭಾರತ ಮತ್ತು ಆಸ್ಟ್ರೇಲಿಯಾ 'ಎ' ತಂಡಗಳ ನಡುವಿನ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರು ಅದ್ಭುತವಾದ ಶತಕ ಸಿಡಿಸಿದ್ದಾರೆ. 150 ರನ್‌ಗಳನ್ನು ಗಳಿಸಿದ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಅವರ ಜೊತೆಯಾಟ ಭಾರತ ತಂಡಕ್ಕೆ ಉತ್ತಮ ಬೆಂಬಲ ನೀಡಿದೆ. ಮಂಡಿ ಗಾಯದಿಂದ ಚೇತರಿಸಿಕೊಂಡ ಪಡಿಕ್ಕಲ್, ಈ ಶತಕದ ಮೂಲಕ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗುವ ಇರಾದೆಯಲ್ಲಿದ್ದಾರೆ.

ಭಾರತ ಎ ಮತ್ತು ಆಸ್ಟ್ರೇಲಿಯಾ ಎ (India A vs Australia A) ತಂಡಗಳ ನಡುವೆ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದ್ದು, ಸರಣಿಯ ಮೊದಲ ಪಂದ್ಯದಲ್ಲಿ, ಎರಡೂ ತಂಡಗಳು ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 532 ರನ್ ಕಲೆಹಾಕಿತು. ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಸಮಬಲದ ಹೋರಾಟ ನೀಡುತ್ತಿದೆ. ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೇಲ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಭರ್ಜರಿ ಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಆಸೀಸ್ ವಿರುದ್ಧ ಪಡಿಕ್ಕಲ್ ಶತಕ
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದೇವದತ್ ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾದ ಬೌಲರ್‌ಗಳ ಬೆವರಿಳಿಸಿದ ಪಡಿಕ್ಕಲ್ ಸ್ಮರಣೀಯ ಶತಕ ಬಾರಿಸಿದರು. 198 ಎಸೆತಗಳಲ್ಲಿ ಒಂಬತ್ತು ಬೌಂಡರಿ ಸಹಿತ ಶತಕ ಪೂರೈಸಿದರು. ಅಂತಿಮವಾಗಿ ಪಡಿಕ್ಕಲ್ 281 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 150 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಇನ್ನಿಂಗ್ಸ್‌ನಲ್ಲಿ, ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಕೂಡ ಅದ್ಭುತ ಜೊತೆಯಾಟವನ್ನು ಕಟ್ಟಿದರು. ಇಬ್ಬರೂ ಆಟಗಾರರು 200 ಕ್ಕೂ ಹೆಚ್ಚು ರನ್‌ಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ಧ್ರುವ್ ಜುರೆಲ್ ಕೂಡ ಶತಕ ಬಾರಿಸಿದರು. ಈ ಇನ್ನಿಂಗ್ಸ್ ದೇವದತ್ ಪಡಿಕ್ಕಲ್‌ಗೆ ಹಲವು ವಿಧಗಳಲ್ಲಿ ವಿಶೇಷವಾಗಿದೆ. ಐಪಿಎಲ್ 2025 ರ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಪಡಿಕ್ಕಲ್ ಐಪಿಎಲ್ ಮಧ್ಯದಲ್ಲಿ ಆರ್‌ಸಿಬಿ ತಂಡದಿಂದ ಹೊರಗುಳಿದಿದ್ದರು. ಆ ಬಳಿಕ ಚೇತರಿಸಿಕೊಂಡು ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಆಡಿದ್ದ ಪಡಿಕ್ಕಲ್ ಸೆಮಿಫೈನಲ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ಈಗ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
2 ಟೆಸ್ಟ್ ಆಡಿರುವ ಪಡಿಕ್ಕಲ್
ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತ ಪರ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಪಡಿಕ್ಕಲ್‌ಗೆ ಇಂಗ್ಲೆಂಡ್ ವಿರುದ್ಧ ಆಡುವ ಅವಕಾಶ ಸಿಕ್ಕಿತು. ನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪರ್ತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತೀಯ ತಂಡದ ಭಾಗವಾಗಿದ್ದರು. ಇಲ್ಲಿಯವರೆಗೆ ಮೂರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 90 ರನ್ ಬಾರಿಸಿರುವ ಪಡಿಕ್ಕಲ್ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
