
ಟಿ20 ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ತಂಡದ ಯುವ ದಾಂಡಿಗ ಡೆವಾಲ್ಡ್ ಬ್ರೆವಿಸ್ ಆರ್ಭಟ ಮುಂದುವರೆದಿದೆ. ಈ ಆರ್ಭಟದೊಂದಿಗೆ ದ್ವಿತೀಯ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದ ಬ್ರೆವಿಸ್ ಇದೀಗ ಮೂರನೇ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ ಬ್ರೆವಿಸ್ ಆಸ್ಟ್ರೇಲಿಯಾ ವಿರುದ್ಧ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ದಾಖಲೆಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…
ಅತ್ಯಧಿಕ ರನ್: ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಡೆವಾಲ್ಡ್ ಬ್ರೆವಿಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರುತುರಾಜ್ ಗಾಯಕ್ವಾಡ್ (123) ಹೆಸರಿನಲ್ಲಿತ್ತು. ಆದರೆ ಆಸೀಸ್ ವಿರುದ್ಧದ ಸರಣಿಯ ದ್ವಿತೀಯ ಪಂದ್ಯದಲ್ಲಿ 125 ರನ್ ಸಿಡಿಸುವ ಮೂಲಕ ಬ್ರೆವಿಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಗರಿಷ್ಠ ಸ್ಕೋರ್: ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆ ಕೂಡ ಡೆವಾಲ್ಡ್ ಬ್ರೆವಿಸ್ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಡೆವೊನ್ ಕಾನ್ವೆ (92) ಹೆಸರಿನಲ್ಲಿತ್ತು. ಇದೀಗ 125 ರನ್ಗಳೊಂದಿಗೆ ಬ್ರೆವಿಸ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿರಿಯ ಶತಕವೀರ: ಆಸ್ಟ್ರೇಲಿಯಾ ವಿರುದ್ಧ ಟಿ20 ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಡೆವಾಲ್ಡ್ ಬ್ರೆವಿಸ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ರೆಕಾರ್ಡ್ 26 ವರ್ಷದ ರುತುರಾಜ್ ಗಾಯಕ್ವಾಡ್ ಹೆಸರಿನಲ್ಲಿತ್ತು. ಇದೀಗ 22ನೇ ವಯಸ್ಸಿನಲ್ಲಿ ಶತಕ ಸಿಡಿಸಿ ಡೆವಾಲ್ಡ್ ಬ್ರೆವಿಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅತೀ ವೇಗದ ಅರ್ಧಶತಕ: ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಕೂಡ ಡೆವಾಲ್ಡ್ ಬ್ರೆವಿಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರವಿ ಬೋಪಾರ ಹೆಸರಿನಲ್ಲಿತ್ತು. ಬೋಪಾರ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರೆ, ಇದೀಗ ಡೆವಾಲ್ಡ್ ಬ್ರೆವಿಸ್ 22 ಬಾಲ್ಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
ಸಿಕ್ಸರ್ ಕಿಂಗ್: ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆಯನ್ನು ಕೂಡ ಬ್ರೆವಿಸ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ರೆಕಾರ್ಡ್ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ ಒಟ್ಟು 13 ಸಿಕ್ಸ್ ಬಾರಿಸಿ ಈ ಹಿಂದೆ ದಾಖಲೆ ನಿರ್ಮಿಸಿದ್ದರು. ಇದೀಗ 14 ಸಿಕ್ಸರ್ಗಳೊಂದಿಗೆ ಡೆವಾಲ್ಡ್ ಬ್ರೆವಿಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.