ಏಷ್ಯಾಕಪ್ಗೆ ಪಾಕಿಸ್ತಾನ್ ತಂಡ ಪ್ರಕಟ: ಬಾಬರ್ ಆಝಂಗೆ ಇಲ್ಲ ಸ್ಥಾನ..!
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಬಹುನಿರೀಕ್ಷಿತ ಏಷ್ಯಾಕಪ್ಗಾಗಿ (Asia Cup 2025) ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರ ಈ ತಂಡದಲ್ಲಿ ಸ್ಟಾರ್ ಆಟಗಾರರಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಕಾರಣ ಬಾಬರ್ ಹಾಗೂ ರಿಝ್ವಾನ್ ಅವರನ್ನು ಏಷ್ಯಾಕಪ್ ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಸಲ್ಮಾನ್ ಅಲಿ ಅಘಾ ಅವರಿಗೆ ನಾಯಕತ್ವವನ್ನು ನೀಡಲಾಗಿದೆ.
ಇನ್ನು ತಂಡದಲ್ಲಿ ಆರಂಭಿಕನಾಗಿ ಫಖರ್ ಝಮಾನ್ ಹಾಗೂ ಸೈಮ್ ಅತ್ಯೂಬ್ ಸ್ಥಾನ ಪಡೆದಿದ್ದು, ವಿಕೆಟ್ ಕೀಪರ್ ಆಗಿ ಮೊಹಮ್ಮದ್ ಹ್ಯಾರಿಸ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ವೇಗಿಗಳಾಗಿ ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್ ಹಾಗೂ ಶಾಹೀನ್ ಅಫ್ರಿದಿ ತಂಡದಲ್ಲಿದ್ದಾರೆ.
ಇವರೊಂದಿಗೆ ಸ್ಪಿನ್ನರ್ಗಳಾಗಿ ಅಬ್ರಾರ್ ಅಹ್ಮದ್, ಸುಫಿಯಾನ್ ಮುಖಿಮ್ ಕೂಡ ಪಾಕ್ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಏಷ್ಯಾಕಪ್ಗೆ ಪಾಕಿಸ್ತಾನ್ ತಂಡ ಈ ಕೆಳಗಿನಂತಿದೆ…
ಏಷ್ಯಾಕಪ್ಗೆ ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.
ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
ಏಷ್ಯಾಕಪ್ನಲ್ಲಿನ ಪಾಕಿಸ್ತಾನ್ ತಂಡದ ವೇಳಾಪಟ್ಟಿ:
ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಪಾಕಿಸ್ತಾನ್ ತಂಡವು ಸೆಪ್ಟೆಂಬರ್ 12 ರಂದು ಒಮಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಭಾರತ ತಂಡವನ್ನು ಎದುರಿಸಲಿದೆ. ಈ ಪಂದ್ಯವು ದುಬೈನಲ್ಲಿ ನಡೆಯಲಿದೆ. ಇನ್ನು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ್ ಯುಎಇ ತಂಡವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದರೆ ಪಾಕಿಸ್ತಾನ್ ತಂಡ ಸೂಪರ್-4 ಹಂತಕ್ಕೇರಲಿದೆ.
- 12 ಸೆಪ್ಟೆಂಬರ್ – ಪಾಕಿಸ್ತಾನ್ vs ಒಮಾನ್ , ದುಬೈ
- 14 ಸೆಪ್ಟೆಂಬರ್ – ಭಾರತ vs ಪಾಕಿಸ್ತಾನ್, ದುಬೈ
- 17 ಸೆಪ್ಟೆಂಬರ್ – ಯುಎಇ vs ಪಾಕಿಸ್ತಾನ್, ದುಬೈ
Published On - 2:20 pm, Sun, 17 August 25
