ಏಷ್ಯಾಕಪ್ಗಾಗಿ ಭಾರತ ತಂಡವನ್ನು ಹೆಸರಿಸಿದ ಕೈಫ್
ASIA CUP 2025: ಏಷ್ಯಾಕಪ್ ಟಿ20 ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ ಆಗಸ್ಟ್ ಮೂರನೇ ವಾರದಲ್ಲಿ ಭಾರತ ತಂಡವನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ. ಏಷ್ಯನ್ ರಾಷ್ಟ್ರಗಳ ನಡುವಣ ಈ ಕ್ರಿಕೆಟ್ ಕದನಕ್ಕಾಗಿ ಯುವ ಪಡೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ಹೀಗಾಗಿ ಈ ಬಾರಿಯ ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೇಗಿರಲಿದೆ ಎಂಬ ಚರ್ಚೆಯ ನಡುವೆ ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ 15 ಸದಸ್ಯರ ತಂಡವೊಂದನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಹಾಗೆಯೇ ಹದಿನೈದು ಸದಸ್ಯರ ಬಳಗದಿಂದ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಸಹ ಕೈ ಬಿಟ್ಟಿದ್ದಾರೆ.
ಮೊಹಮ್ಮದ್ ಕೈಫ್ ಪ್ರಕಾರ, ಏಷ್ಯಾಕಪ್ಗಾಗಿ ಭಾರತ ತಂಡದಲ್ಲಿ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕಕ್ಕೆ ಎಡಗೈ ದಾಂಡಿಗ ತಿಲಕ್ ವರ್ಮಾ ಆಯ್ಕೆಯಾಗಲಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುವುದು ಖಚಿತ. ಐದನೇ ಕ್ರಮಾಂಕಕ್ಕೆ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಹೆಸರಿಸಿದ್ದಾರೆ.
ಇನ್ನು ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದರೆ, ಏಳನೇ ಕ್ರಮಾಂಕಕ್ಕೆ ಶಿವಂ ದುಬೆ ಅವರನ್ನು ಹೆಸರಿಸಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಅವರನ್ನು ಎಂಟನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿದ್ದಾರೆ. ಬೌಲರ್ಗಳಾಗಿ ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀ್ತ್ ಬುಮ್ರಾ ಅವರನ್ನು ಹೆಸರಿಸಿದ್ದಾರೆ.
ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು
ಇನ್ನುಳಿದಂತೆ ಹೆಚ್ಚುವರಿ ಆಟಗಾರರಾಗಿ ಶುಭ್ಮನ್ ಗಿಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ ಹಾಗೂ ಮೊಹಮ್ಮದ್ ಸಿರಾಜ್ ಅವರ ಹೆಸರನ್ನು ಮುಂದಿಟ್ಟಿದ್ದಾರೆ. ಇಲ್ಲಿ ಗಿಲ್ ಅವರನ್ನು ಹೆಚ್ಚುವರಿ ಆರಂಭಿಕನ ಸ್ಥಾನಕ್ಕೆ ಆಯ್ಕೆ ಮಾಡಿದರೆ, ಜಿತೇಶ್ ಶರ್ಮಾ ಅವರನ್ನು 2ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ. ಇನ್ನು ವರುಣ್ ಚಕ್ರವರ್ತಿ ಅವರನ್ನು ಹೆಚ್ಚುವರಿ ಸ್ಪಿನ್ನರ್ ಹಾಗೂ ವೇಗಿಯಾಗಿ ಮೊಹಮ್ಮದ್ ಸಿರಾಜ್ ಅವರನ್ನು ಹೆಸರಿಸಿದ್ದಾರೆ.
ಮೊಹಮ್ಮದ್ ಕೈಫ್ ಅವರ ಭಾರತ ಟಿ20 ತಂಡ:
- ಅಭಿಷೇಕ್ ಶರ್ಮಾ
- ಸಂಜು ಸ್ಯಾಮ್ಸನ್
- ತಿಲಕ್ ವರ್ಮಾ
- ಸೂರ್ಯಕುಮಾರ್ ಯಾದವ್ (ನಾಯಕ)
- ಅಕ್ಷರ್ ಪಟೇಲ್ (ಉಪನಾಯಕ)
- ಹಾರ್ದಿಕ್ ಪಾಂಡ್ಯ
- ಶಿವಂ ದುಬೆ
- ವಾಷಿಂಗ್ಟನ್ ಸುಂದರ್
- ಕುಲ್ದೀಪ್ ಯಾದವ್
- ಅರ್ಷದೀಪ್ ಸಿಂಗ್
- ಜಸ್ಪ್ರೀತ್ ಬುಮ್ರಾ
- ಶುಭ್ಮನ್ ಗಿಲ್
- ಜಿತೇಶ್ ಶರ್ಮಾ
- ವರುಣ್ ಚಕ್ರವರ್ತಿ
- ಮೊಹಮ್ಮದ್ ಸಿರಾಜ್.
