Sri Lanka vs Pakistan, 1st Test: ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಧನಂಜಯ ಡಿಸಿಲ್ವಾ ಶತಕ ಸಿಡಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಶ್ರೀಲಂಕಾ ತಂಡಕ್ಕೆ ನಾಯಕನ ನಿರ್ಧಾರಕ್ಕೆ ತಕ್ಕಂತಹ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಆಟಗಾರ ನಿಶಾನ್ ಮದುಷ್ಕ (4) ಹಾಗೂ ಕುಸಾಲ್ ಮೆಂಡಿಸ್ (12) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ದಿಮುತ್ ಕರುಣರತ್ನೆ 29 ರನ್ಗಳಿಸಿದರೆ, ದಿನೇಶ್ ಚಂಡಿಮಲ್ ಕೇವಲ 1 ರನ್ಗಳಿಸಿ ಔಟಾದರು.
54 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ ತಂಡಕ್ಕೆ ಈ ಹಂತದಲ್ಲಿ ಅಜಂಲೊ ಮ್ಯಾಥ್ಯೂಸ್ ಹಾಗೂ ಧನಂಜಯ್ ಡಿಸಿಲ್ವಾ ಆಸರೆಯಾದರು. ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಈ ಜೋಡಿಯು 5ನೇ ವಿಕೆಟ್ಗೆ 131 ರನ್ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ 64 ರನ್ಗಳಿಸಿದ್ದ ಮ್ಯಾಥ್ಯೂಸ್ ಅಬ್ರಾರ್ ಅಹ್ಮದ್ ಎಸೆತದಲ್ಲಿ ಔಟಾದರು. ಇದಾಗ್ಯೂ ಮತ್ತೊಂದೆಡೆ ಏಕಾಂಗಿ ಹೋರಾಟ ಮುಂದುವರೆಸಿದ ಧನಂಜಯ್ ಡಿಸಿಲ್ವಾ 175 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 214 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 122 ರನ್ ಕಲೆಹಾಕಿದರು.
ಈ ಹಂತದಲ್ಲಿ ನಸೀಮ್ ಶಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ಧನಂಜಯ್ ಡಿಸಿಲ್ವಾ (122) ಕ್ಯಾಚ್ ನೀಡಿ ನಿರ್ಗಮಿಸಿದರು. ಡಿಸಿಲ್ವಾ ನಿರ್ಗಮನದೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್ಗಳು ಶ್ರೀಲಂಕಾ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 312 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಪಾಕಿಸ್ತಾನ್ ಪರ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗೂ ಅಬ್ರಾರ್ ಅಹ್ಮದ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. 73 ರನ್ಗಳಿಸುವಷ್ಟರಲ್ಲಿ ಶಫೀಖ್ (19), ಇಮಾಮ್ ಉಲ್ ಹಕ್ (1), ಶಾನ್ ಮಸೂದ್ (39) ಹಾಗೂ ಬಾಬರ್ ಆಝಂ (13) ವಿಕೆಟ್ ಕಳೆದುಕೊಂಡಿತು.
ಇದರ ಬೆನ್ನಲ್ಲೇ ಅನುಭವಿ ಆಟಗಾರ ಸರ್ಫರಾಝ್ ಅಹ್ಮದ್ (17) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಸೌದ್ ಶಕೀಲ್ ಹಾಗೂ ಅಘ ಸಲ್ಮಾನ್ ರಕ್ಷಣಾತ್ಮಕ ಆಟದೊಂದಿಗೆ ತಂಡಕ್ಕೆ ಆಸರೆಯಾಗಿ ನಿಂತರು.
ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸೌದ್ ಶಕೀಲ್ 69 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಅಘ ಸಲ್ಮಾನ್ 67 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಅಲ್ಲದೆ 6ನೇ ವಿಕೆಟ್ಗೆ 125 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿದರು.
ಇನ್ನು 2ನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿದೆ. ಸೌದ್ ಶಕೀಲ್ (69) ಹಾಗೂ ಅಘ ಸಲ್ಮಾನ್ (61) ಕ್ರೀಸ್ನಲ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ (ನಾಯಕ) , ನಿಶಾನ್ ಮದುಷ್ಕ , ಕುಸಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ಧನಂಜಯ ಡಿ ಸಿಲ್ವಾ , ದಿನೇಶ್ ಚಂಡಿಮಲ್ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ವಿಶ್ವ ಫೆರ್ನಾಂಡೋ , ಕಸುನ್ ರಜಿತ.
ಇದನ್ನೂ ಓದಿ: Team India: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಖ್, ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) , ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘ ಸಲ್ಮಾನ್ , ನೌಮಾನ್ ಅಲಿ , ಅಬ್ರಾರ್ ಅಹ್ಮದ್ , ಶಾಹೀನ್ ಅಫ್ರಿದಿ , ನಸೀಮ್ ಶಾ.