MLC 2023: 6 ಸಿಕ್ಸ್, 5 ಫೋರ್ನೊಂದಿಗೆ ಬ್ರಾವೊ ಆರ್ಭಟ: ಆದರೂ ಸೋತ TSK
Dwayne Bravo: ಕೇವಲ 39 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 76 ರನ್ ಬಾರಿಸಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೊ ಅಬ್ಬರಿಸಿದ್ದರು.
MLC 2023: ಡಲ್ಲಾಸ್ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 5ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ವಾಷಿಂಗ್ಟನ್ ಫ್ರೀಡಮ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ತಂಡದ ನಾಯಕ ಮೊಯಿಸಸ್ ಹೆನ್ರಿಕ್ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಅದರಂತೆ ವಾಷಿಂಗ್ಟನ್ ಫ್ರೀಡಮ್ ಪರ ಇನಿಂಗ್ಸ್ ಆರಂಭಿಸಿದ ಮ್ಯಾಥ್ಯೂ ಶಾರ್ಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಶಾರ್ಟ್ 50 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 80 ರನ್ ಬಾರಿಸಿದರು.
ಇನ್ನು ನಾಯಕ ಹೆನ್ರಿಕ್ಸ್ 21 ರನ್ಗಳ ಕೊಡುಗೆ ನೀಡಿದರೆ, ಮುಖ್ತಾರ್ ಅಹ್ಮದ್ 20 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ವಾಷಿಂಗ್ಟನ್ ಫ್ರೀಡಮ್ ತಂಡವು 5 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.
164 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಡೆವೊನ್ ಕಾನ್ವೆ (0) ಶೂನ್ಯಕ್ಕೆ ಔಟಾದರೆ, ಫಾಫ್ ಡುಪ್ಲೆಸಿಸ್ 14 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಸ್ಯಾಂಟ್ನರ್ 22 ರನ್ಗಳ ಕಾಣಿಕೆ ನೀಡಿದರು.
ಕೇವಲ 78 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಸೋಲಿನ ಸುಳಿಗೆ ಸಿಲುಕಿತ್ತು. ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ವೇನ್ ಬ್ರಾವೊ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗೆಲುವಿನ ಆಸೆ ಚಿಗುರಿಸಿದರು.
To the Longest 6️⃣ of the #MLC2023 pic.twitter.com/aSBoybnWYp
— Texas Super Kings (@TexasSuperKings) July 17, 2023
ವಾಷಿಂಗ್ಟನ್ ಫ್ರೀಡಮ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಬ್ರಾವೊ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೊನೆಯ ಓವರ್ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ 27 ರನ್ಗಳ ಅವಶ್ಯಕತೆಯಿತ್ತು.
ಅನ್ರಿಕ್ ನೋಕಿಯ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ 2 ರನ್ ಓಡಿದ ಬ್ರಾವೊ, 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಮತ್ತೆರಡು ರನ್ ಓಡಿದರು. 4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 5ನೇ ಎಸೆತದಲ್ಲಿ ಬ್ರಾವೊ ಫೋರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ 20 ರನ್ ಕಲೆಹಾಕಿದರು.
ಕೇವಲ 39 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 76 ರನ್ ಬಾರಿಸಿದ ಬ್ರಾವೊ ಅವರ ಈ ಏಕಾಂಗಿ ಹೋರಾಟದ ಹೊರತಾಗಿಯೂ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 6 ರನ್ಗಳಿಂದ ಸೋಲನುಭಸಿತು. ಇನ್ನು ವಾಷಿಂಗ್ಟನ್ ಫ್ರೀಡಮ್ ತಂಡದ ಪರ 80 ರನ್ ಬಾರಿಸಿ ಮಿಂಚಿದ್ದ ಮ್ಯಾಥ್ಯೂ ಶಾರ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಡೆವೊನ್ ಕಾನ್ವೆ (ವಿಕೆಟ್ ಕೀಪರ್) , ಫಾಫ್ ಡು ಪ್ಲೆಸಿಸ್ (ನಾಯಕ) , ಲಹಿರು ಮಿಲಂತ , ಡೇವಿಡ್ ಮಿಲ್ಲರ್ , ಮಿಲಿಂದ್ ಕುಮಾರ್ , ಮಿಚೆಲ್ ಸ್ಯಾಂಟ್ನರ್ , ಡ್ವೇನ್ ಬ್ರಾವೊ, ಕ್ಯಾಲ್ವಿನ್ ಸಾವೇಜ್ , ಜೆರಾಲ್ಡ್ ಕೋಟ್ಜಿ , ಮೊಹಮ್ಮದ್ ಮೊಹ್ಸಿನ್ , ರಸ್ಟಿ ಥರಾನ್.
ಇದನ್ನೂ ಓದಿ: Zim Afro T10 League: ಹೊಸ ಲೀಗ್ನಲ್ಲಿ ಭಾರತೀಯ ಕ್ರಿಕೆಟಿಗರು..!
ವಾಷಿಂಗ್ಟನ್ ಫ್ರೀಡಮ್ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ಮುಖ್ತಾರ್ ಅಹ್ಮದ್ , ಗ್ಲೆನ್ ಫಿಲಿಪ್ಸ್ , ಮೊಯಿಸಸ್ ಹೆನ್ರಿಕ್ಸ್ (ನಾಯಕ) , ಒಬಸ್ ಪಿನಾರ್ , ಮಾರ್ಕೊ ಜಾನ್ಸೆನ್ , ಅಕೆಲ್ ಹೋಸೇನ್ , ಡೇನ್ ಪೀಡ್ಟ್ , ಅನ್ರಿಕ್ ನೋಕಿಯ, ಸೌರಭ್ ನೇತ್ರವಾಲ್ಕರ್.