
ಭಾರತ ಮತ್ತು ದಕ್ಷಿಣ ಆಫ್ರಿಕಾ ಎ (India A vs South Africa A) ತಂಡಗಳ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನ 1 ರಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಎ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ (Dhruv Jurel) ಸತತ 2ನೇ ಶತಕ ಬಾರಿಸುವ ಮೂಲಕ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 175 ಎಸೆತಗಳಲ್ಲಿ ಅಜೇಯ 132 ರನ್ ಬಾರಿಸಿದ್ದ ಧ್ರುವ್ ಜುರೆಲ್, ತಂಡದ ಇನ್ನಿಂಗ್ಸ್ ನಿಭಾಯಿಸಿದ್ದರು. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಧ್ರುವ್ ಜುರೆಲ್ ಅದ್ಭುತ ಶತಕ ಬಾರಿಸುವ ಮೂಲಕ ಭಾರತ ಎ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಧ್ರುವ್ ಜುರೆಲ್, ಎರಡನೇ ಇನ್ನಿಂಗ್ಸ್‌ನಲ್ಲಿಯೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು. ಎರಡನೇ ಇನ್ನಿಂಗ್ಸ್ನಲ್ಲೂ ಭಾರತದ ಟಾಪ್ ಆರ್ಡರ್ ಅಲ್ಪ ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿತು. ಇದರ ಜೊತೆಗೆ ತಂಡದ ನಾಯಕ ರಿಷಭ್ ಪಂತ್ ಕೂಡ ಗಾಯದಿಂದಾಗಿ ಡಗೌಟ್ಗೆ ವಾಪಸ್ಸಾದರು. ಇಂತಹ ಸಮಯದಲ್ಲಿ ತಂಡದ ಇನ್ನಿಂಗ್ಸ್ ಅನ್ನು ಏಕಾಂಗಿಯಾಗಿ ಕಟ್ಟಿದ ಧ್ರುವ್ ಜುರೆಲ್ ಮತ್ತೊಮ್ಮೆ 100 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಧ್ರುವ್ ಜುರೆಲ್ 159 ಎಸೆತಗಳಲ್ಲಿ ತಮ್ಮ ಸತತ ಎರಡನೇ ಶತಕ ಪೂರೈಸಿದರು. ಇದರಲ್ಲಿ 12 ಬೌಂಡರಿಗಳು ಸೇರಿದ್ದವು. ಜುರೆಲ್ ಅವರ ಈ ಶತಕದ ಇನ್ನಿಂಗ್ಸ್‌ನಿಂದಾಗಿ ಭಾರತ ತಂಡವು 300 ರನ್‌ಗಳ ಗಡಿ ದಾಟಿತು. ಜುರೆಲ್ ಶತಕ ಬಾರಿಸಿದ್ದು ಮಾತ್ರವಲ್ಲದೆ ಹರ್ಷ್ ದುಬೆ ಅವರೊಂದಿಗೆ ಆರನೇ ವಿಕೆಟ್‌ಗೆ 184 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಜುರೇಲ್, ತಂಡವು 126 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಕ್ರಿಸ್ಗಿಳಿದು ಶತಕ ಬಾರಿಸಿದ್ದರು.
ಅಜೇಯ ಶತಕ ಬಾರಿಸಿದ ಧ್ರುವ್ ಜುರೆಲ್ಗೆ ಮುಂದಿನ ಸರಣಿಯಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಧ್ರುವ್ ಜುರೆಲ್ ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ಭಾರತ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆಯುವ ಇರಾದೆಯಲಿದ್ದಾರೆ. ಆದಾಗ್ಯೂ, ಈ ಸರಣಿಯಲ್ಲಿ ರಿಷಭ್ ಪಂತ್ ಕೂಡ ತಂಡಕ್ಕೆ ಮರಳಲಿದ್ದಾರೆ. ಅಲ್ಲದೆ ತಂಡದ ಉಪನಾಯಕನಾಗಿರುವ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುವುದರಿಂದ ಜುರೆಲ್ಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ. ಹೀಗಾಗಿ ಜುರೆಲ್ರನ್ನು ಆಡಿಸಬೇಕೆಂದರೆ ಉಳಿದ ಆಟಗಾರರಲ್ಲಿ ಒಬ್ಬರನ್ನು ತಂಡದಿಂದ ಹೊರಗಿಡಬೇಕಾಗುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ನಿತೀಶ್ ರೆಡ್ಡಿಯನ್ನು ತಂಡದಿಂದ ಹೊರಗಿಟ್ಟು ಧ್ರುವ್ ಜುರೆಲ್ರನ್ನು ಆಡಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Sat, 8 November 25