ಅಜೇಯ ಶತಕ ಬಾರಿಸಿದ ಧ್ರುವ್ ಜುರೆಲ್ಗೆ ಮುಂದಿನ ಸರಣಿಯಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ
Dhruv Jurel century: ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ತಂಡದ ಬ್ಯಾಟಿಂಗ್ ಕುಸಿತದ ನಡುವೆಯೂ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಅಜೇಯ 132 ರನ್ ಗಳಿಸಿ ಶತಕ ಸಿಡಿಸಿದರು. ರಿಷಭ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ, ಜುರೆಲ್ ತಂಡಕ್ಕೆ ಆಸರೆಯಾದರು. ಈ ಅಸಾಮಾನ್ಯ ಪ್ರದರ್ಶನವು ಜುರೆಲ್ ಅವರನ್ನು ಭವಿಷ್ಯದ ಟೆಸ್ಟ್ ತಂಡಕ್ಕೆ ಪರಿಗಣಿಸುವ ಸಾಧ್ಯತೆಗಳನ್ನು ಹೆಚ್ಚಿಸಿದೆ, ಆದರೂ ಪಂತ್ ಮರಳುವಿಕೆ ಸ್ಪರ್ಧೆಯನ್ನು ಹೆಚ್ಚಿಸಿದೆ.

ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದ್ದ ಭಾರತ ಎ ತಂಡ (India A vs South Africa A) ಇದೀಗ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಆದಾಗ್ಯೂ ಈ ಪಂದ್ಯದಲ್ಲಿ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಪಡೆ ಕೇವಲ 255 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಒಂದು ಹಂತದಲ್ಲಿ ಭಾರತ ತಂಡ ಕೇವಲ 126 ರನ್‌ಗಳಿಗೆ ಪ್ರಮುಖ 7 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ (Dhruv Jurel) ಅಜೇಯ ಶತಕ ಸಿಡಿಸಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ಈ ಪಂದ್ಯದಲ್ಲಿ ಜುರೇಲ್ ಬಿಗ್ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರಾದರೂ ಉಳಿದವರಿಂದ ಅವರಿಗೆ ಬೆಂಬಲ ಸಿಗಲಿಲ್ಲ.
ಜುರೆಲ್ ಅಜೇಯ ಶತಕ
ನವೆಂಬರ್ 6 ರಂದು ಆರಂಭವಾದ ಈ ಎರಡನೇ ಪಂದ್ಯದಲ್ಲಿ ಭಾರತ ಎ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದಾಗ್ಯೂ, ಟೆಸ್ಟ್ ತಂಡದ ಸದಸ್ಯರಾದ ಕೆಎಲ್ ರಾಹುಲ್, ಸಾಯಿ ಸುದರ್ಶನ್, ನಾಯಕ ರಿಷಭ್ ಪಂತ್ ಮತ್ತು ದೇವದತ್ ಪಡಿಕ್ಕಲ್ ಮೊದಲ ಇನ್ನಿಂಗ್ಸ್ನಲ್ಲಿ ಬಹುಬೇಗನೇ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಟೀಂ ಇಂಡಿಯಾ ಕೇವಲ 126 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಿಂದ ಟೀಂ ಇಂಡಿಯಾ 150 ರನ್‌ಗಳಿಸುವುದು ಸಹ ಅಸಂಭವವೆಂದು ತೋರುತ್ತಿತ್ತು.
ಆದರೆ ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ನೆರವಾದ ಜುರೆಲ್ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದರು. ಹಾಗೆಯೇ ಜುರೆಲ್, ಕುಲ್ದೀಪ್ ಯಾದವ್ ಅವರೊಂದಿಗೆ 79 ರನ್‌ಗಳ ಜೊತೆಯಾಟವನ್ನಾಡಿದ್ದು ಮಾತ್ರವಲ್ಲದೆ ಅದ್ಭುತ ಶತಕವನ್ನು ಬಾರಿಸಿದರು. ಇವರಿಬ್ಬರ ಜೊತೆಯಾಟದಿಂದಾಗಿ ಭಾರತ ಎ ತಂಡದ ಮೊದಲ ಇನ್ನಿಂಗ್ಸ್ ಅಂತಿಮವಾಗಿ 255 ರನ್‌ಗಳಿಗೆ ಕೊನೆಗೊಂಡಿತು. ಆದರೆ ದಕ್ಷಿಣ ಆಫ್ರಿಕಾ ಎ ತಂಡದ ಬೌಲರ್‌ಗಳು ಧ್ರುವ್ ಜುರೆಲ್ ಅವರನ್ನು ಔಟ್ ಮಾಡುವಲ್ಲಿ ವಿಫಲರಾದರು. ಅಂತಿಮವಾಗಿ ಜುರೇಲ್ 12 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ ಸಹಿತ 132 ರನ್ ಬಾರಿಸಿ ಅಜೇಯರಾಗಿ ಉಳಿದರು. ಟೆಸ್ಟ್ ಸರಣಿಯ ಆರಂಭಕ್ಕೂ ಮೊದಲು ಜುರೆಲ್ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ಒಳ್ಳೇಯ ಸಂಗತಿಯಾಗಿದೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗನಿಗಿಲ್ಲ ಸ್ಥಾನ
ಟೆಸ್ಟ್ ಸರಣಿಯಲ್ಲಿ ಜುರೇಲ್ಗೆ ಸ್ಥಾನ?
ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಜುರೇಲ್ ಅಜೇಯ ಶತಕ ಬಾರಿಸಿದರೂ ಅವರಿಗೆ ಸ್ಥಾನ ಸಿಗುವುದು ಅನುಮಾನ. ಏಕೆಂದರೆ ಇಂಜುರಿಯಿಂದಾಗಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದ ರಿಷಭ್ ಪಂತ್, ಇದೀಗ ಸಂಪೂರ್ಣ ಫಿಟ್ ಆಗಿ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಅವರು ವಿಕೆಟ್‌ಕೀಪರ್ ಪಾತ್ರವನ್ನು ನಿಭಾಯಿಸಲಿದ್ದಾರೆ. ಇನ್ನು ಎರಡನೇ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಕೆಎಲ್ ರಾಹುಲ್ ತಂಡದಲಿದ್ದಾರೆ. ಹೀಗಿರುವಾಗ ಜುರೇಲ್ಗೆ ಸ್ಥಾನ ಸಿಗುವುದು ಕಷ್ಟಕರವಾಗಿದೆ. ಆದಾಗ್ಯೂ ಅವರನ್ನು ಬ್ಯಾಟ್ಸ್‌ಮನ್ ಆಗಿ ಆಡಿಸುವ ಅವಕಾಶವೂ ಮ್ಯಾನೇಜ್ಮೆಂಟ್ಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
