
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಆರಂಭಕ್ಕೂ ಮುನ್ನ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಟಾಸ್ ಗೆದ್ದಿದ್ದರು. ಇತ್ತ ರೋಹಿತ್ ಶರ್ಮಾ ಟಾಸ್ ಸೋಲುತ್ತಿದ್ದಂತೆ ಟೀಮ್ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಟಾಸ್ ಪ್ರಕ್ರಿಯೆ ವೇಳೆ ಪಿಚ್ ಬಳಿಕ ಕಾಣಿಸಿಕೊಂಡಿದ್ದರು. ಅತ್ತ ಹಿಟ್ಮ್ಯಾನ್ ಟಾಸ್ ಸೋತಿರುವುದು ಗೊತ್ತಾಗುತ್ತಿದ್ದಂತೆ ಹೀಯಾಳಿಸಿದ್ದಾರೆ. ಇದಕ್ಕೆ ರೋಹಿತ್ ಶರ್ಮಾ ತಮಾಷೆಯಿಂದ ನೀನು ಮೊದಲು ಮೈದಾನದಿಂದ ನಡೆ ಎಂಬಾರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದೀಗ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ನಡುವಣ ಕಾಲೆಳೆಯುವಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್ (79) ಅವರ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಕಲೆಹಾಕಿತು.
250 ರನ್ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಕೇನ್ ವಿಲಿಯಮ್ಸನ್ (81) ಅರ್ಧಶತಕ ಬಾರಿಸಿದ್ದರು. ಇದಾಗ್ಯೂ ವರುಣ್ ಚಕ್ರವರ್ತಿ ಅವರ ಸ್ಪಿನ್ ಮೋಡಿ ಮುಂದೆ ರನ್ಗಳಿಸಲು ಪರದಾಡಿದ ಕಿವೀಸ್ ಬ್ಯಾಟರ್ಗಳು ಅಂತಿಮವಾಗಿ 45.3 ಓವರ್ಗಳಲ್ಲಿ 205 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಈ ಪಂದ್ಯವನ್ನು 44 ರನ್ಗಳಿಂದ ಗೆದ್ದುಕೊಂಡಿದೆ.
ಇದನ್ನೂ ಓದಿ: ಹೀಗೂ ಉಂಟೆ.. ವಿರಾಟ್ ಕೊಹ್ಲಿ ಔಟಾಗಿದಕ್ಕೆ ಫಿಲಿಪ್ಸ್ ಕಂಪೆನಿಗೆ ಬೈಗುಳ..!
ಇನ್ನು ಉಭಯ ತಂಡಗಳು ಸೆಮಿಫೈನಲ್ಗೇರಿದ್ದು, ಅದರಂತೆ ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ಮಾರ್ಚ್ 5 ರಂದು ಲಾಹೋರ್ನಲ್ಲಿ ನಡೆಯಲಿದೆ.
Published On - 12:53 pm, Mon, 3 March 25