ಹೀಗೂ ಉಂಟೆ.. ವಿರಾಟ್ ಕೊಹ್ಲಿ ಔಟಾಗಿದಕ್ಕೆ ಫಿಲಿಪ್ಸ್ ಕಂಪೆನಿಗೆ ಬೈಗುಳ..!
IND vs NZ: ಚಾಂಪಿಯನ್ಸ್ ಟ್ರೋಫಿಯ 12ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 249 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 205 ರನ್ಗಳಿಗೆ ಆಲೌಟ್ ಆಗಿದೆ. ಈ ಸೋಲಿನ ಹೊರತಾಗಿಯೂ ಈ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಎಲ್ಲರನ್ನು ನಿಬ್ಬೆರಗಾಗಿಸಿತ್ತು.
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 3ನೇ ಓವರ್ನಲ್ಲೇ ಶುಭ್ಮನ್ ಗಿಲ್ (2) ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರೂ, ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ನಿಂದಾಗಿ ಹೊರನಡೆಯಬೇಕಾಯಿತು.
1 / 5
ಮ್ಯಾಟ್ ಹೆನ್ರಿ ಎಸೆದ 7ನೇ ಓವರ್ನ 4ನೇ ಎಸೆತವನ್ನು ಕೊಹ್ಲಿ ಕಟ್ ಶಾಟ್ ಬಾರಿಸಿದ್ದರು. ಆದರೆ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಅತ್ಯದ್ಭುತ ಡೈವಿಂಗ್ನೊಂದಿಗೆ ಚೆಂಡನ್ನು ಹಿಡಿದರು. ಈ ಕ್ಯಾಚ್ ನೋಡಿ ಖುದ್ದು ವಿರಾಟ್ ಕೊಹ್ಲಿಯೇ ದಂಗಾಗಿ ನಿಂತಿದ್ದರು.
2 / 5
ಅತ್ತ ವಿರಾಟ್ ಕೊಹ್ಲಿ (11) ಔಟಾಗಿ ಪೆವಿಲಿಯನ್ ಸೇರುತ್ತಿದ್ದಂತೆ ಇತ್ತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಗ್ಲೆನ್ ಫಿಲಿಪ್ಸ್ ಅವರನ್ನು ಅವಾಚ್ಯ ಪದಗಳೊಂದಿಗೆ ನಿಂದಿಸಲಾರಂಭಿಸಿದ್ದರು. ಆದರೆ ಹೀಗೆ ನಿಂದಿಸಿದ್ದು ಎಲೆಕ್ಟ್ರಾನಿಕ್ ಕಂಪನಿ ಫಿಲಿಪ್ಸ್ ಅನ್ನು ಎಂಬುದೇ ಇಲ್ಲಿ ಟ್ವಿಸ್ಟ್.
3 / 5
ಅಂದರೆ ಗ್ಲೆನ್ ಫಿಲಿಪ್ಸ್ ಅವರ ಇನ್ಸ್ಟಾಗ್ರಾಮ್ ಖಾತೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಅನೇಕರು ಫಿಲಿಪ್ಸ್ ಕಂಪೆನಿಯ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಅವಾಚ್ಯ ಶಬ್ದಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಕೊಹ್ಲಿಯ ಕ್ಯಾಚ್ ಹಿಡಿದಿದ್ದಕ್ಕೆ ಫಿಲಿಪ್ಸ್ ಅವರನ್ನು ಜರಿಯಲಾರಂಭಿಸಿದ್ದಾರೆ.
4 / 5
ಪರಿಣಾಮ ಎಲೆಕ್ಟ್ರಾನಿಕ್ ಕಂಪನಿ ಫಿಲಿಪ್ಸ್ ಖಾತೆಯಲ್ಲಿ ಇದೀಗ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ರಾಶಿ ರಾಶಿ ಕಾಮೆಂಟ್ಗಳು ಬಂದು ಬಿದ್ದಿವೆ. ಆದರೆ ಕ್ರಿಕೆಟ್ಗೂ ತನಗೂ ಯಾವುದೇ ಸಂಬಂಧವಿಲ್ಲದಿದ್ದರೂ, ವಿರಾಟ್ ಕೊಹ್ಲಿಯ ಕೆಲ ಅಭಿಮಾನಿಗಳ ಅತಿರೇಕದ ವರ್ತನೆಯಿಂದಾಗಿ ಫಿಲಿಪ್ಸ್ ಕಂಪೆನಿಗೆ ಶಾಕ್ ಆಗಿದ್ದಂತು ನಿಜ.