
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಐತಿಹಾಸಿಕ ಸಾಧನೆಯ ಬಳಿಕ, ತಮ್ಮ ಸುದೀರ್ಘ ಕ್ರಿಕೆಟ್ ಪ್ರಯಾಣ, ಬ್ಯಾಟಿಂಗ್ ಶೈಲಿ, ಯುವ ಆಟಗಾರರಿಗೆ ಸಂದೇಶ ಹಾಗೂ ನಾಯಕ ಶುಬ್‌ಮನ್ ಗಿಲ್ ಕುರಿತು ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಪ್ರಮುಖಾಂಶಗಳು ಇಲ್ಲಿವೆ…
15,000 ರನ್‌ಗಳ ಅಪರೂಪದ ಸಾಧನೆ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ನನ್ನ ಗಮನ ಎಂದಿಗೂ ಮೈಲಿಗಲ್ಲುಗಳ ಮೇಲಿರಲಿಲ್ಲ. ತಂಡದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನ ಜವಾಬ್ದಾರಿಯನ್ನು ನಿಭಾಯಿಸುವುದಷ್ಟೇ ನನ್ನ ಕೆಲಸ. ಹಾಗೆ ಮಾಡುತ್ತಾ ಹೋದಾಗ ಇಂತಹ ಸಾಧನೆಗಳು ತಾವಾಗಿಯೇ ಒದಗಿಬರುತ್ತವೆ. ಇಷ್ಟು ಸುದೀರ್ಘ ಕಾಲ ದೇಶವನ್ನು ಪ್ರತಿನಿಧಿಸಿರುವುದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅತ್ಯಂತ ವಿನಮ್ರತೆಯಿಂದ ಹೇಳಿದ್ದಾರೆ.
ತಮ್ಮ ಸುದೀರ್ಘ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟ ಕೊಹ್ಲಿ, ಕ್ರಿಕೆಟ್ ಹೆಚ್ಚಾಗಿ ಮನಸ್ಸಿಗೆ ಸಂಬಂಧಿಸಿದ ಆಟ ಎಂದಿದ್ದಾರೆ. “ನಾನು ಎಂದಿಗೂ ನೆಟ್ಸ್‌ನಲ್ಲಿ ಅತಿಯಾಗಿ ಅಭ್ಯಾಸ ಮಾಡಿದವನಲ್ಲ. ಮಾನಸಿಕವಾಗಿ ಫ್ರೆಶ್ ಆಗಿರುವುದು ಮತ್ತು ಪ್ರಸ್ತುತ ಕ್ಷಣದಲ್ಲಿ ಬದುಕುವುದು ನನಗೆ ಮುಖ್ಯ. ಆದರೆ ಮುಕ್ತ ಮನಸ್ಸಿನಿಂದ ಬ್ಯಾಟ್ ಮಾಡಲು ದೈಹಿಕ ಫಿಟ್‌ನೆಸ್ ಅತಿ ಅಗತ್ಯ. ದೇಹ ಫಿಟ್ ಆಗಿದ್ದಾಗ ಮಾತ್ರ ನಮಗೆ ಬೇಕಾದಂತೆ ಪಂದ್ಯವನ್ನು ವಿಶ್ಯುಲೈಸ್ ಮಾಡಲು ಮತ್ತು ಮೈದಾನದಲ್ಲಿ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ” ಎಂದಿದ್ದಾರೆ. ಅಲ್ಲದೆ, ತಮ್ಮ ವೃತ್ತಿಜೀವನದ ಈ ಹಂತದಲ್ಲಿ ತಮ್ಮ ಆಟದ ಗೇರ್ ಬದಲಾಯಿಸಿ, ಇನ್ನಷ್ಟು ಆಕ್ರಮಣಕಾರಿಯಾಗಿ ಆಡುವ ಹೊಸ ಆವೃತ್ತಿಯನ್ನು ಅನ್ವೇಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ಖ್ಯಾತಿ ಮತ್ತು ಅಭಿಮಾನಿಗಳ ಅತಿಯಾದ ಪ್ರೀತಿಯ ನಡುವೆ ತಾವೆಲ್ಲಿಂದ ಬಂದೆವು ಎಂಬುದನ್ನು ಮರೆಯಬಾರದು ಎಂದು ವಿರಾಟ್ ಕೊಹ್ಲಿ ನೆನಪಿಸಿದ್ದಾರೆ. “ನಾವು ಬಾಲ್ಯದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ದಿನಗಳನ್ನು ತಿರುಗಿ ನೋಡಿದಾಗ ಕೃತಜ್ಞತಾ ಭಾವ ಮೂಡುತ್ತದೆ. ಭಾರತಕ್ಕಾಗಿ ಆಡುವ ಅವಕಾಶ ಸಿಗದೇ ಹೋಗುವ ಸಾಧ್ಯತೆಯೂ ಇತ್ತು, ಆದರೆ ನಾನಿಲ್ಲಿ ಕೋಟ್ಯಂತರ ಜನರ ಮುಂದೆ ಆಡುತ್ತಿದ್ದೇನೆ.”
ಯುವ ಕ್ರಿಕೆಟಿಗರಿಗೆ ಸಂದೇಶ ನೀಡಿದ ಅವರು, “ಮೈದಾನದ ಹೊರಗಿನ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಮೈದಾನಕ್ಕೆ ಇಳಿದ ಮೇಲೆ ಅದೇ ನಿಮ್ಮ ಪ್ರಪಂಚವಾಗಬೇಕು. ತಂಡಕ್ಕಾಗಿ ಮೈದಾನದಲ್ಲಿ ಎಲ್ಲವನ್ನೂ ನೀಡಲು ಸಿದ್ಧರಿರಬೇಕು. ನೀವು 150 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೂ, ಓವರ್‌ನಲ್ಲಿ ನಾಲ್ಕು ಡಬಲ್ಸ್ ಓಡಬೇಕಾಗಿ ಬಂದರೆ ಯಾವುದೇ ನೆಪ ಹೇಳದೆ ಓಡಬೇಕು” ಎಂದು ಕಠಿಣ ಪರಿಶ್ರಮದ ಪಾಠ ಹೇಳಿದ್ದಾರೆ.
ಟಿ20 ಮಾದರಿಯಿಂದ ದೂರ ಸರಿದಿರುವುದು ಕೊಹ್ಲಿಗೆ ಹೆಚ್ಚಿನ ಸ್ಪಷ್ಟತೆ ನೀಡಿದೆ. “ವಿಶ್ವಕಪ್‌ಗೆ ಇನ್ನು ಒಂದು ವರ್ಷ ಬಾಕಿಯಿದೆ. ನನ್ನ ಗುರಿ ಏನು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಸಿಗುವ ಪ್ರತಿ ಅವಕಾಶದಲ್ಲೂ ಸಕಾರಾತ್ಮಕವಾಗಿ ಆಡಲು ಬಯಸುತ್ತೇನೆ, ಆದರೆ ಅದು ಬೇಜವಾಬ್ದಾರಿಯ ಆಟವಾಗಿರುವುದಿಲ್ಲ. ಆಕ್ರಮಣಕಾರಿ ಆಟ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ನಡುವಿನ ಸೂಕ್ಷ್ಮ ರೇಖೆಯನ್ನು ಅರಿತು ತಂಡವನ್ನು ಗೆಲ್ಲಿಸುವುದು ಒಬ್ಬ ಅನುಭವಿ ಆಟಗಾರನಾಗಿ ನನ್ನ ಕರ್ತವ್ಯ” ಎಂದು ಕೊಹ್ಲಿ ಹೇಳಿದ್ದಾರೆ.
ಯುವ ಆಟಗಾರ ಶುಭ್ಮನ್ ಗಿಲ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಗುಣವನ್ನು ಕೊಹ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಗಿಲ್ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ಬಲವಾದ ಕಾರಣವಿದೆ. ವಿಭಿನ್ನ ಪರಿಸ್ಥಿತಿಗಳಿಂದ ತಂಡವನ್ನು ಹೇಗೆ ಗೆಲ್ಲಿಸಬೇಕೆಂಬ ಸರಿಯಾದ ದೃಷ್ಟಿಕೋನ ಅವನಿಗಿದೆ. ಅವನು ಪ್ರಸ್ತುತ ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಒಬ್ಬ. ಬ್ಯಾಟಿಂಗ್ ಮಾಡುವಾಗ ನಾವಿಬ್ಬರೂ ಹೆಚ್ಚು ಮಾತನಾಡುವ ಅಗತ್ಯವಿರುವುದಿಲ್ಲ, ಇಬ್ಬರಿಗೂ ಏನು ಮಾಡಬೇಕೆಂದು ತಿಳಿದಿರುತ್ತದೆ. ಮೈದಾನದಲ್ಲಿ ಅವನಿಗೆ ನನ್ನ ಸಹಾಯ ಯಾವಾಗ ಬೇಕಿದ್ದರೂ ನಾನು ಸದಾ ಸಿದ್ಧ” ಎಂದು ಕೊಹ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ತಂಡದ 15 ವರ್ಷಗಳ ಕನಸು ನುಚ್ಚುನೂರು!
ವಿರಾಟ್ ಕೊಹ್ಲಿ ಅವರ ಈ ಮಾತುಗಳು ಕೇವಲ ಅವರ ರನ್‌ಗಳ ಹಸಿವನ್ನು ಮಾತ್ರವಲ್ಲದೆ, ಆಟದ ಮೇಲಿರುವ ಅಪಾರ ಗೌರವ, ಶಿಸ್ತು ಮತ್ತು ಮುಂದಿನ ಪೀಳಿಗೆಯನ್ನು ಬೆಳೆಸುವ ಅವರ ನಾಯಕತ್ವದ ಗುಣವನ್ನು ಎತ್ತಿ ತೋರಿಸುತ್ತವೆ. 15,000 ರನ್‌ಗಳ ಮೈಲಿಗಲ್ಲು ಕೇವಲ ಆರಂಭವಷ್ಟೇ, ‘ಕಿಂಗ್ ಕೊಹ್ಲಿ’ ಕಡೆಯಿಂದ ಭಾರತೀಯ ಕ್ರಿಕೆಟ್‌ಗೆ ಸಿಗಬೇಕಾದ ಕೊಡುಗೆ ಇನ್ನೂ ಬಾಕಿಯಿದೆ ಎಂಬುದು ಈ ಸಂದರ್ಶನದಿಂದ ಸ್ಪಷ್ಟವಾಗುತ್ತದೆ.
Published On - 1:20 pm, Mon, 28 September 26