Duleep Trophy 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದ 2ನೇ ದಿನದಾಟದಲ್ಲಿ ದಕ್ಷಿಣ ವಲಯ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ಪರ ಮಯಾಂಕ್ ಅಗರ್ವಾಲ್ (28), ತಿಲಕ್ ವರ್ಮಾ (40) ಹಾಗೂ ಹನುಮ ವಿಹಾರಿ (63) ಮಾತ್ರ ಮಿಂಚಿದ್ದರು.
ಅತ್ತ ಅತ್ಯುತ್ತಮ ದಾಳಿ ಸಂಘಟಿಸಿದ ಶಮ್ಸ್ ಮುಲಾನಿ 3 ವಿಕೆಟ್ ಪಡೆದರೆ, ಅರ್ಝಾನ್, ಚಿಂತನ್ ಗಜ, ಧರ್ಮೇಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಪರಿಣಾಮ ದಕ್ಷಿಣ ವಲಯ ತಂಡವು 213 ರನ್ಗಳಿಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಪಶ್ವಿಮ ವಲಯಕ್ಕೆ ಪೃಥ್ವಿ ಶಾ (65) ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್ಗಳನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸುವಲ್ಲಿ ಕರ್ನಾಟಕದ ವೇಗಿ ವಿಧ್ವತ್ ಕಾವೇರಪ್ಪ ಯಶಸ್ವಿಯಾದರು.
97 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಪಶ್ಚಿಮ ವಲಯ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಈ ವೇಳೆ ದಾಳಿಗಿಳಿದ ಕೊಡಗಿನ ಕುವರ ವಿಧ್ವತ್ ಅನುಭವಿ ಚೇತೇಶ್ವರ ಪೂಜಾರ (9), ಸೂರ್ಯಕುಮಾರ್ ಯಾದವ್ (8) ಹಾಗೂ ಸರ್ಫರಾಝ್ ಖಾನ್ (0) ವಿಕೆಟ್ ಪಡೆದರು.
ಇನ್ನು ವಿಧ್ವತ್ ಕಾವೇರಪ್ಪನಿಗೆ ಉತ್ತಮ ಸಾಥ್ ನೀಡಿದ ಮತ್ತೋರ್ವ ಕನ್ನಡಿಗ ವಿಜಯ್ಕುಮಾರ್ ವೈಶಾಕ್ ಕೂಡ 2 ವಿಕೆಟ್ ಕಬಳಿಸಿದರು. ಪರಿಣಾಮ ಪಶ್ಚಿಮ ವಲಯ 129 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
2ನೇ ದಿನದಾಟದ ಅಂತ್ಯಕ್ಕೆ ಪಶ್ಚಿಮ ವಲಯ ತಂಡವು 7 ವಿಕೆಟ್ ಕಳೆದುಕೊಂಡು 129 ರನ್ಗಳಿಸಿದೆ. ಧರ್ಮೇಂದ್ರ ಜಡೇಜಾ ಹಾಗೂ ಅತಿತ್ ಶೇತ್ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ವಲಯ ಪರ 44 ರನ್ ನೀಡಿ ವಿಧ್ವತ್ ಕಾವೇರಪ್ಪ 4 ವಿಕೆಟ್ ಕಬಳಿಸಿದರೆ, ವಿಜಯ್ಕುಮಾರ್ ವೈಶಾಕ್ 2 ವಿಕೆಟ್ ಪಡೆದು ಮಿಂಚಿದರು.
ದಕ್ಷಿಣ ವಲಯ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ , ಹನುಮ ವಿಹಾರಿ (ನಾಯಕ) , ರಿಕಿ ಭುಯಿ (ವಿಕೆಟ್ ಕೀಪರ್) , ತಿಲಕ್ ವರ್ಮಾ , ವಾಷಿಂಗ್ಟನ್ ಸುಂದರ್ , ಸಾಯಿ ಕಿಶೋರ್ , ಸಚಿನ್ ಬೇಬಿ , ವಿಧ್ವತ್ ಕಾವೇರಪ್ಪ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
ಪಶ್ಚಿಮ ವಲಯ ಪ್ಲೇಯಿಂಗ್ 11: ಪೃಥ್ವಿ ಶಾ , ಪ್ರಿಯಾಂಕ್ ಪಾಂಚಾಲ್ (ನಾಯಕ) , ಚೇತೇಶ್ವರ ಪೂಜಾರ , ಸೂರ್ಯಕುಮಾರ್ ಯಾದವ್ , ಸರ್ಫರಾಝ್ ಖಾನ್ , ಧರ್ಮೇಂದ್ರಸಿನ್ಹ್ ಜಡೇಜಾ , ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಚಿಂತನ್ ಗಜ , ಅರ್ಝಾನ್ ನಾಗವಾಸ್ವಾಲ್ಲಾ , ಅತಿತ್ ಶೇತ್ , ಶಮ್ಸ್ ಮುಲಾನಿ.