ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಡಿ ತಂಡಕ್ಕೆ ಸೋಲಾಗಿದೆ. ಇದಕ್ಕೂ ಮುನ್ನ ಟೂರ್ನಿಯ ಮೊದಲ ಸುತ್ತಿನಲ್ಲಿ ರುತುರಾಜ್ ನಾಯಕತ್ವದ ಭಾರತ ಸಿ ತಂಡದ ವಿರುದ್ಧ 6 ವಿಕೆಟ್ಗಳ ಸೋಲು ಕಂಡಿದ್ದ ಶ್ರೇಯಸ್ ಪಡೆ, ಇದೀಗ ಎರಡನೇ ಸುತ್ತಿನಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಭಾರತ ಎ ತಂಡದ ವಿರುದ್ಧ 186 ರನ್‌ಗಳಿಂದ ಸೋಲನುಭವಿಸಿದೆ. ಆಂಧ್ರಪ್ರದೇಶದ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ನಾಲ್ಕನೇ ದಿನದಾಟದಲ್ಲಿ 488 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಡಿ ತಂಡವು 301 ರನ್‌ಗಳಿಗೆ ಆಲೌಟ್ ಆಯಿತು.
488 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಡಿ ಪರ ಏಕಾಂಗಿ ಹೋರಾಟ ನಡೆಸಿದ ರಿಕಿ ಭುಯಿ 113 ರನ್ ಗಳ ಇನ್ನಿಂಗ್ಸ್ ಆಡಿದರೆ, ಯಶ್ ದುಬೆ 37 ರನ್ ಬಾರಿಸಿದರು, ಅಥರ್ವ ತಾಯ್ಡೆ ಖಾತೆ ತೆರೆಯದೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್‌ಗಳ ಇನ್ನಿಂಗ್ಸ್ ಆಡಿದ್ದ ದೇವದತ್ ಪಡಿಕ್ಕಲ್ ಎರಡನೇ ಇನ್ನಿಂಗ್ಸ್‌ನಲ್ಲಿ 1 ರನ್‌ಗಳಿಗೆ ಸುಸ್ತಾದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ನಾಯಕ ಶ್ರೇಯಸ್ ಅಯ್ಯರ್, ಎರಡನೇ ಇನ್ನಿಂಗ್ಸ್‌ನಲ್ಲಿ 41 ರನ್ ಗಳಿಸಿ ಔಟಾದರು. ಉಳಿದಂತೆ ಸಂಜು ಸ್ಯಾಮ್ಸನ್ 40, ಸರನ್ಶ್ ಜೈನ್ 5, ಸೌರಭ್ ಕುಮಾರ್ 22 ಮತ್ತು ಹರ್ಷಿತ್ ರಾಣಾ 24 ರನ್ ಗಳಿಸಿ ಔಟಾದರು. ಅರ್ಷದೀಪ್ ಸಿಂಗ್ 7 ರನ್ ಗಳಿಸಿ ಅಜೇಯರಾಗಿ ಉಳಿದರೆ, ವಿದ್ವತ್ ಕವರಪ್ಪ ಖಾತೆ ತೆರೆಯದೆ ಔಟಾದರು.
ಭಾರತ ಬಿ ಪರ ಬೌಲಿಂಗ್‌ನಲ್ಲಿ ಮಿಂಚಿದ ತನುಷ್ ಕೋಟ್ಯಾನ್ 4, ಶಮ್ಸ್ ಮುಲಾನಿ 3 ಹಾಗೂ ಖಲೀಲ್ ಅಹ್ಮದ್ ಮತ್ತು ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರು. ಮೂರನೇ ದಿನದಂತ್ಯಕ್ಕೆ ಭಾರತ ಎ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 380 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಭಾರತ ಡಿ ತಂಡಕ್ಕೆ 487 ರನ್‌ಗಳ ಗುರಿ ಸಿಕ್ಕಿತ್ತು. ಭಾರತ ಎ ಮೊದಲ ಇನಿಂಗ್ಸ್‌ನಲ್ಲಿ 290 ರನ್ ಗಳಿಸಿದ್ದರೆ, ಭಾರತ ಡಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಆಲೌಟ್ ಆಗಿತ್ತು.
ಭಾರತ ಎ ತಂಡದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ಮಯಾಂಕ್ ಅಗರ್ವಾಲ್ 56 ರನ್ ಕೊಡುಗೆ ನೀಡಿದರೆ, ಶಾಶ್ವತ್ ರಾವತ್ 64 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಥಮ್ ಸಿಂಗ್ 122 ರನ್ ಗಳಿಸಿದರೆ, ತಿಲಕ್ ವರ್ಮಾ ಅಜೇಯ 111 ರನ್ ಬಾರಿಸಿದ್ದರು.
ಬಿ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಬಿ ಮತ್ತು ಭಾರತ ಸಿ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಭಾರತ ಸಿ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 128 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ತಂಡದ ಪರ ಬಿ ಸಾಯಿ ಸುದರ್ಶನ್ 11 ರನ್ ಗಳಿಸಿ ಔಟಾದರೆ, ರುತುರಾಜ್ ಗಾಯಕ್ವಾಡ್ 62 ರನ್, ರಜತ್ ಪಾಟಿದಾರ್ 42 ರನ್ ಮತ್ತು ಇಶಾನ್ ಕಿಶನ್ 1 ರನ್ ಗಳಿಸಿ ಔಟಾದರು. ಬಾಬಾ ಇಂದರ್‌ಜೀತ್ 5 ರನ್ ಗಳಿಸಿ ಅಜೇಯರಾಗಿ ಉಳಿದರೆ, ಅಭಿಷೇಕ್ ಪೊರೆಲ್ 4 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತ ಬಿ ಪರ ಬೌಲಿಂಗ್‌ನಲ್ಲಿ ಮಿಂಚಿದ ದೀಪಕ್ ಚಹಾರ್ 2, ಮುಶೀರ್ ಖಾನ್ ಮತ್ತು ಮುಖೇಶ್ ಕುಮಾರ್ 1-1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಕೊನೆಯ ದಿನ ಭಾರತ ಬಿ ತಂಡ ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 332 ರನ್‌ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಭಾರತ ಸಿ ತಂಡಕ್ಕೆ 193 ರನ್‌ಗಳ ಮುನ್ನಡೆ ಸಿಕ್ಕಿತ್ತು.
ಭಾರತ ಬಿ ಪರ ಅಭಿಮನ್ಯು ಈಶ್ವರನ್ 286 ಎಸೆತಗಳಲ್ಲಿ 157 ರನ್ ಗಳಿಸಿ ಅಜೇಯರಾಗಿ ಉಳಿದರೆ, ಎನ್ ಜಗದೀಸನ್ 70, ಮುಶೀರ್ ಖಾನ್ 1, ಸರ್ಫರಾಜ್ ಖಾನ್ 16, ರಿಂಕು ಸಿಂಗ್ 6, ನಿತೀಶ್ ರೆಡ್ಡಿ 2, ವಾಷಿಂಗ್ಟನ್ ಸುಂದರ್ 13 ಮತ್ತು ಆರ್ ಸಾಯಿ ಕಿಶೋರ್ 21 ರನ್ ಗಳಿಸಿ ಔಟಾದರು. ರಾಹುಲ್ ಚಹಾರ್ 18 ರನ್ ಗಳಿಸಿ ಔಟಾದರು. ನವದೀಪ್ ಸೈನಿ ಖಾತೆ ತೆರೆಯದೆ ಔಟಾದರೆ, ಮುಖೇಶ್ ಕುಮಾರ್ 4 ರನ್ ಗಳಿಸಿ ಔಟಾದರು. ಭಾರತ ಸಿ ಪರ ಮಾರಕ ಬೌಲಿಂಗ್ ಮಾಡಿದ ಅನ್ಶುಲ್ ಕಾಂಬೋಜ್ 8 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Sun, 15 September 24