ಅಯ್ಯಯ್ಯೋ ಅಯ್ಯರ್: ಕನ್ನಡಕ ಧರಿಸಿ ಬ್ಯಾಟಿಂಗ್​; ಶೂನ್ಯಕ್ಕೆ ಔಟಾದ ಶ್ರೇಯಸ್​ಗೆ ಟ್ರೋಲಿಗರ ಕಾಟ

|

Updated on: Sep 13, 2024 | 5:14 PM

Shreyas Iyer: ಕೇವಲ 7 ಎಸೆತಗಳನ್ನು ಆಡಿದ ಶ್ರೇಯಸ್ ಅಯ್ಯರ್ ಖಾತೆ ತೆರೆಯದೆ ಔಟಾದರು. ಖಲೀಲ್ ಅಹ್ಮದ್ ಎಸೆತದಲ್ಲಿ ಔಟಾದ ಅಯ್ಯರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ, ಅಯ್ಯರ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿರುವ ನೆಟ್ಟಿಗರು ತರಹೆವಾರಿ ಕಾಮೆಂಟ್​ಗಳೊಂದಿಗೆ ಅವರ ಕಾಲೆಳೆದಿದ್ದಾರೆ.

ಅಯ್ಯಯ್ಯೋ ಅಯ್ಯರ್: ಕನ್ನಡಕ ಧರಿಸಿ ಬ್ಯಾಟಿಂಗ್​; ಶೂನ್ಯಕ್ಕೆ ಔಟಾದ ಶ್ರೇಯಸ್​ಗೆ ಟ್ರೋಲಿಗರ ಕಾಟ
ಶ್ರೇಯಸ್ ಅಯ್ಯರ್
Follow us on

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ವೃತ್ತಿಜೀವನ ಸದ್ಯಕ್ಕೆ ಹಳಿ ತಪ್ಪಿದ ರೈಲಿನಂತ್ತಾಗಿದೆ. ಸಾಕಷ್ಟು ಅವಕಾಶಗಳು ಸಿಕ್ಕರೂ ಅಯ್ಯರ್​ಗೆ ಫಾರ್ಮ್​ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಲಂಕಾ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದ ಅಯ್ಯರ್, ಆ ಬಳಿಕ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ದುಲೀಪ್ ಟ್ರೋಫಿಯಲ್ಲೂ ಅಯ್ಯರ್ ಕಳಪೆ ಫಾರ್ಮ್ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರೂ ಅಯ್ಯರ್ ತಂಡಕ್ಕೆ ಗೆಲುವು ಸಿಕ್ಕಿರಲಿಲ್ಲ. ಇದೀಗ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಅಯ್ಯರ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕ್ರಿಕೆಟ್​ನಲ್ಲಿ ಬ್ಯಾಟರೊಬ್ಬ ಶೂನ್ಯಕ್ಕೆ ಔಟಾಗುವುದು ಸರ್ವೆ ಸಾಮಾನ್ಯ. ಆದರೆ ಶ್ರೇಯಸ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಅಯ್ಯರ್ ಶೂನ್ಯಕ್ಕೆ ಔಟಾದುದ್ದಲ್ಲ. ಬದಲಿಗೆ ಅವರು ಕಪ್ಪು ಕನ್ನಡಕ ಧರಿಸಿ ಬ್ಯಾಟಿಂಗ್​ಗೆ ಬಂದಿದ್ದು.

ಕಪ್ಪು ಕನ್ನಡಕ ಧರಿಸಿ ಬ್ಯಾಟಿಂಗ್​ಗೆ ಇಳಿದ ಅಯ್ಯರ್

ವಾಸ್ತವವಾಗಿ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಎ ಹಾಗೂ ಭಾರತ ಡಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಭಾರತ ಡಿ ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಕನ್ನಡಕ ಹಾಕಿಕೊಂಡು ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದಿದ್ದರು. ಆದರೆ ಕೇವಲ 7 ಎಸೆತಗಳನ್ನು ಆಡಿದ ಅಯ್ಯರ್ ಖಾತೆ ತೆರೆಯದೆ ಔಟಾದರು. ಖಲೀಲ್ ಅಹ್ಮದ್ ಎಸೆತದಲ್ಲಿ ಔಟಾದ ಅಯ್ಯರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ, ಅಯ್ಯರ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿರುವ ನೆಟ್ಟಿಗರು ತರಹೆವಾರಿ ಕಾಮೆಂಟ್​ಗಳೊಂದಿಗೆ ಅವರ ಕಾಲೆಳೆದಿದ್ದಾರೆ. ಅವುಗಳ ಒಂದಿಷ್ಟು ಝಲಕ್ ಇಲ್ಲಿದೆ.

ಪಂದ್ಯ ಹೀಗಿದೆ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ಎ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿತು. ತಂಡದ ಪರ ಶಮ್ಸ್ ಮುಲಾನಿ 89 ರನ್‌ಗಳ ಅತ್ಯಧಿಕ ಇನ್ನಿಂಗ್ಸ್‌ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ತನುಷ್ ಕೋಟ್ಯಾನ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಇನ್ನು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಡಿ ತಂಡ 183 ರನ್​ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ 92 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಉಳಿದವರು ಹೆಚ್ಚಾಗಿ ಒಂದಂಕಿಗೆ ಸುಸ್ತಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ