ಭಾರತ ಮತ್ತು ಶ್ರೀಲಂಕಾ ನಡುವಣ ಸರಣಿಯು ಶನಿವಾರದಿಂದ ಶುರುವಾಗಲಿದೆ. ಆದರೆ ಅದಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ದುಷ್ಮಂತ ಚಮೀರಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇತ್ತೀಚೆಗೆ ಮುಗಿದ ಲಂಕಾ ಪ್ರೀಮಿಯರ್ ಲೀಗ್ನ ಪಂದ್ಯದ ವೇಳೆ ಚಮೀರಾ ಉಸಿರಾಟದ ಸೋಂಕಿನ ಸಮಸ್ಯೆಯಿಂದ ಬಳಲಿದ್ದರು. ಈ ಸೋಂಕಿನಿಂದ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಸರಣಿಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜುಲೈ 27 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದೆ.
ಈ ಎರಡೂ ಸರಣಿಗಳಿಗೆ ಅಲಭ್ಯರಾಗುವುದಾಗಿ ದುಷ್ಮಂತ ಚಮೀರಾ ಶ್ರೀಲಂಕಾ ಕ್ರಿಕೆಟ್ಗೆ ಬೋರ್ಡ್ಗೆ ತಿಳಿಸಿದ್ದಾರೆ. ಹೀಗಾಗಿ ಟಿ20 ಸರಣಿ ಆರಂಭಕ್ಕೂ ಮುನ್ನ ಬದಲಿ ಆಟಗಾರನನ್ನು ಪ್ರಕಟಿಸುವ ಸಾಧ್ಯತೆಯಿದೆ.
ಭಾರತದ ವಿರುದ್ಧದ ಸರಣಿಗೆ ಶ್ರೀಲಂಕಾ ಟಿ20 ತಂಡವನ್ನು ಪ್ರಕಟಿಸಲಾಗಿದ್ದು, ನೂತನ ನಾಯಕನಾಗಿ ಚರಿತ್ ಅಸಲಂಕಾ ಆಯ್ಕೆಯಾಗಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಈ ಬಾರಿ ಜಾಫ್ನಾ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ತಂಡವನ್ನು ಚರಿತ್ ಅಸಲಂಕಾ ಮುನ್ನಡೆಸಿದ್ದರು. ಇದೀಗ ಲೀಗ್ ಕ್ರಿಕೆಟ್ನ ಯಶಸ್ವಿ ನಾಯಕನಿಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕ್ಯಾಪ್ಟನ್ ಪಟ್ಟ ನೀಡಿದೆ.
ಇನ್ನು ಈ ತಂಡದಿಂದ ಹಿರಿಯ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಹೊರಬಿದ್ದಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಮ್ಯಾಥ್ಯೂಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರನ್ನು ಕೈ ಬಿಡಲಾಗಿದ್ದು, ಮತ್ತೋರ್ವ ಹಿರಿಯ ಆಟಗಾರ ದಿನೇಶ್ ಚಂಡಿಮಲ್ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅದರಂತೆ ಶ್ರೀಲಂಕಾ ಟಿ20 ತಂಡ ಈ ಕೆಳಗಿನಂತಿದೆ.
ಶ್ರೀಲಂಕಾ ಟಿ20 ತಂಡ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಜನಿತ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಚಮಿಂದು ವಿಕ್ರಮಸಿಂಗ್, ಮಥೀಶ ಪತಿರಾಣ, ನುವಾನ್ ತುಷಾರ, ಬಿನೂರ ಫರ್ನಾಂಡೋ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಯಿಂದ ಶುರುವಾಗಲಿದ್ದು, ಈ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ಚಾನೆಲ್ ಹಾಗೂ ಸೋನಿ ಲೈವ್ ಆ್ಯಪ್ನಲ್ಲಿ ವೀಕ್ಷಿಸಬಹುದು.
Published On - 2:28 pm, Wed, 24 July 24