
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026 (IPL 2026) ರ 15ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ (KKR vs LSG) ತಂಡಗಳು ಮುಖಾಮುಖಿಯಾಗಿದ್ದವು. ಲೀಗ್ನಲ್ಲಿ ಮೊದಲ ಗೆಲುವಿಗಾಗಿ ಹುಡುಕಾಟ ನಡೆಸುತ್ತಿರುವ ಕೆಕೆಆರ್ ತಂಡ ತವರಿನಲ್ಲಿ ನಡೆದ ಸತತ ಎರಡನೇ ಪಂದ್ಯದಲ್ಲೂ ಸೋಲು ಕಂಡಿತು. ಈ ಮೂಲಕ ಲೀಗ್ನಲ್ಲಿ ಕೆಕೆಆರ್‌ಗೆ ಸತತ 4ನೇ ಸೋಲು (3 ಸೋಲು, 1 ಪಂದ್ಯ ರದ್ದು) ಎದುರಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿ ಗೆಲ್ಲಲು 182 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಲಕ್ನೋ 17ನೇ ಓವರ್ ಮುಕ್ತಾಯದವರೆಗೂ ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಪಂದ್ಯದ ದಿಕ್ಕು ಬದಲಿಸಿದ ಲಕ್ನೋ ತಂಡದ ಯುವ ಬ್ಯಾಟರ್ ಮುಕುಲ್ ಚೌಧರಿ (Mukul Choudhary) ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 181 ರನ್ ಗಳಿಸಿತು. ತಂಡಕ್ಕೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಫಿನ್ ಅಲೆನ್ ಕೇವಲ 9 ರನ್‌ಗಳಿಸಿ ಔಟಾದರು. ನಂತರ ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 41 ರನ್ ಗಳಿಸಿ ಚುರುಕಾದ ಇನ್ನಿಂಗ್ಸ್ ಆಡಿದರು. ಅದ್ಭುತ ಫಾರ್ಮ್ನಲ್ಲಿರುವ ಯುವ ಬ್ಯಾಟರ್ ಅಂಕುಶ್ ರಘುವಂಶಿ 33 ಎಸೆತಗಳಲ್ಲಿ 45 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ ಅಜೇಯ 32 ರನ್ ಬಾರಿಸಿದರೆ, ರೋವ್ಮನ್ ಪೊವೆಲ್ ಕೂಡ 24 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ತಂಡದ ಸ್ಕೋರ್ ಅನ್ನು 181ಕ್ಕೆ ಕೊಂಡೊಯ್ದರು.
182 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡವು ಕಳಪೆ ಆರಂಭವನ್ನೇ ಪಡೆಯಿತು. ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಬೇಗನೆ ಔಟಾದರು. ರಿಷಭ್ ಪಂತ್ ಮತ್ತು ನಿಕೋಲಸ್ ಪೂರನ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಲಕ್ನೋ ತಂಡದ ಸ್ಕೋರ್ 15.6 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತ್ತು. ಹೀಗಾಗಿ ಪಂದ್ಯ ಕೆಕೆಆರ್ ಪರವಾದಂತೆ ತೋರುತ್ತಿತ್ತು. ಆದರೆ ಅಲ್ಲಿಂದ ಮುಕುಲ್ ಚೌಧರಿ ಅದ್ಭುತ ಬ್ಯಾಟಿಂಗ್ ಮಾಡಿದರು. ಮುಕುಲ್ ಚೌಧರಿ ಕೇವಲ 27 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 54 ರನ್ ಗಳಿಸಿದರು. ಈ ಒಂಬತ್ತು ಹೊಡೆತಗಳು ಕೆಕೆಆರ್‌ನ ಸೋಲಿಗೆ ಮುನ್ನುಡಿ ಬರೆದವು. ಆಯುಷ್ ಬದೋನಿ ಕೂಡ 34 ಎಸೆತಗಳಲ್ಲಿ 54 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
KKR vs LSG: ಅಂಪೈರ್ಗಳ ಅಜಾಗರೂಕತೆ; ಕೆಕೆಆರ್‌ಗೆ ಮಹಾಮೋಸ? ವಿಡಿಯೋ ನೋಡಿ
ರಾಜಸ್ಥಾನದ 21 ವರ್ಷದ ಯುವ ಆಟಗಾರ ಮುಕುಲ್ ಚೌಧರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ್ದರು. ಅಂತಿಮವಾಗಿ ಲಕ್ನೋ ಅವರನ್ನು 2.60 ಕೋಟಿಗೆ ಖರೀದಿಸಿತು. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿರುವುದರ ಜೊತೆಗೆ, ಅವರು ವೇಗದ ಬೌಲರ್ ಕೂಡ. ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿರುವ ಮುಕುಲ್ ಇಂದಿನ ಪಂದ್ಯದಲ್ಲಿ ಅದನ್ನೇ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 pm, Thu, 9 April 26