ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (ENG vs AUS) ನಡುವಣ 2023ನೇ ಆವೃತ್ತಿಯ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಆರಂಭವಾಗಿದೆ. ಈಗಾಗಲೇ ಪುರುಷರ ವಿಭಾಗದಲ್ಲಿ ಮೊದಲ ಪಂದ್ಯ ನಡೆದಿದ್ದು ಇದರಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸೀಸ್ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಇದೀಗ ಮಹಿಳಾ ಆ್ಯಶಸ್ಗೆ (Womens Ashes) ಚಾಲನೆ ಸಿಕ್ಕಿದೆ. ನ್ಯಾಥಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಮಹಿಳೆಯರು ಮೇಲುಗೈ ಸಾಧಿಸಿದರು. ಎಲೀಸ್ ಪೆರಿ (Ellyse Perry) ಹಾಗೂ ತಹಿಲಾ ಮೆಕ್ಗ್ರಾತ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕಾಂಗರೂ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿದೆ.
ಈ ಪಂದ್ಯದಲ್ಲಿ ಎಲೀಸ್ ಪೆರಿ 99 ರನ್ಗಳಿಗೆ ಔಟ್ ಆಗುವ ಮೂಲಕ 1ರನ್ನಿಂದ ಶತಕ ವಂಚಿತರಾದರು. ಟಾಸ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಅಲಿಸ್ಸಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಓಪನರ್ಗಳಾದ ಬೆಥ್ ಮೂನಿ ಹಾಗೂ ಪೋಬ್ ಲಿಚ್‌ಫೀಲ್ಡ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಪೋಬ್ 23 ರನ್ಗೆ ಔಟಾದರು. ಎರಡನೇ ವಿಕೆಟ್ಗೆ ಮೂನಿ (33) ಹಾಗೂ ಎಲೀಸ್ ಪೆರಿ 48 ರನ್ ಸೇರಿಸಿದರು. ನಂತರ ಶುರುವಾಗಿದ್ದು ಪೆರಿ ಹಾಗೂ ತಹಿಲಾ ಮೆಕ್ಗ್ರಾತ್ ಜೊತೆಯಾಟ. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಉಪಯುಕ್ತ ಕಾಣಿಕೆ ನೀಡಿತು.
Virender Sehwag: ಮಿಸ್ಟರ್ ಕೂಲ್ ಆಟಗಾರನನ್ನು ಹೆಸರಿಸಿದ ವೀರೇಂದ್ರ ಸೆಹ್ವಾಗ್
ಮೂರನೇ ವಿಕೆಟ್ಗೆ ಪೆರಿ ಹಾಗೂ ತಹಿಲಾ 129 ರನ್ಗಳ ಜೊತೆಯಾಟ ಆಡಿದರು. ತಹಿಲಾ 83 ಎಸೆತಗಳಲ್ಲಿ 61 ರನ್ ಗಳಿಸಿ ಎಕ್ಸೆಲ್‌ಸ್ಟನ್ ಎಸೆತದಲ್ಲಿ ಬೌಲ್ಡ್ ಆದರು. ಇತ್ತ ಪೆರಿ ಅವರು ಶತಕ ಪೂರೈಸಲು ಇನ್ನೊಂದು ರನ್ ಮಾತ್ರ ಅಗತ್ಯವಿದ್ದಾಗ ಔಟಾದರು. 153 ಎಸೆತಗಳಲ್ಲಿ 15 ಫೋರ್ನೊಂದಿಗೆ 99 ರನ್ಗೆ ನಿರ್ಗಮಿಸಿದರು. ಇದರ ಜೊತೆಗೆ ಐತಿಹಾಸಿಕ ಸಾಧನೆ ಕೂಡ ಮಾಡಿದರು. ಪೆರಿ ಇದೀಗ ದಾಖಲೆಯ ಹತ್ತು ಮಹಿಳಾ ಆ್ಯಶಸ್ ಸರಣಿ ಆಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ.
ಪೆರಿ-ತಹಿಲಾ ನಿರ್ಗಮನದ ಬಳಿಕ ಬಂದ ಜೆಸ್ ಜಾನ್ಸನ್ 11 ರನ್ಗೆ ಔಟಾದರೆ, ನಾಯಕಿ ಅಲಿಸ್ಸಾ ಸೊನ್ನೆ ಸುತ್ತಿದರು. ಆ್ಯಶ್ಲೆಘ್ ಗಾರ್ಡನರ್ 76 ಎಸೆತಗಳಲ್ಲಿ 40 ರನ್ ಕಲೆಹಾಕಿದರು. ಸದ್ಯ ಮೊದಲ ದಿನದಾಟದ ಅಂತ್ಯಕ್ಕೆ ಅನ್ನಾಬೆಲ್ ಸುಥರ್ಲೆಂಡ್ 39 ರನ್ ಗಳಿಸಿ ಮತ್ತು ಅಲಾನ ಕಿಂಗ್ 7 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 85 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿದೆ. ಇಂಗ್ಲೆಂಡ್ ಪರ ಸೂಫಿ ಎಕ್ಸೆಲ್‌ಸ್ಟನ್ 3 ಹಾಗೂ ಲೌರೆನ್ ಫಿಲರ್ 2 ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ