ACC Emerging Asia Cup 2023: ಸಿಡಿಲಬ್ಬರದ ಶತಕ ಸಿಡಿಸಿದ ಯಶ್! ಏಷ್ಯಾಕಪ್​ನಲ್ಲಿ ಭಾರತಕ್ಕೆ ಶುಭಾರಂಭ

|

Updated on: Jul 14, 2023 | 4:33 PM

ACC Emerging Asia Cup 2023: ತನ್ನ ಮೊದಲ ಪಂದ್ಯದಲ್ಲಿ ಯುಎಇ ಎ ತಂಡವನ್ನು ಎದುರಿಸಿದ ಟೀಂ ಇಂಡಿಯಾ ನಾಯಕ ಯಶ್ ಧುಲ್ ಅವರ ಸ್ಫೋಟಕ ಶತಕದ ನೆರವಿನಿಂದಾಗಿ ಕೇವಲ 27 ಓವರ್​ಗಳಲ್ಲೇ 8 ವಿಕೆಟ್​ಗಳಿಂದ ಗೆಲುವಿನ ದಡ ಸೇರಿತು.

ACC Emerging Asia Cup 2023: ಸಿಡಿಲಬ್ಬರದ ಶತಕ ಸಿಡಿಸಿದ ಯಶ್! ಏಷ್ಯಾಕಪ್​ನಲ್ಲಿ ಭಾರತಕ್ಕೆ ಶುಭಾರಂಭ
ಯಶ್ ಧುಲ್
Follow us on

ಶ್ರೀಲಂಕಾದಲ್ಲಿ ನಿನ್ನೆಯಿಂದ ಅಂದರೆ, ಜುಲೈ 13ರಿಂದ ಆರಂಭವಾಗಿರುವ ಎಸಿಸಿ ಎಮರ್ಜಿಂಗ್ ಏಷ್ಯಾಕಪ್-2023 (ACC Men’s Emerging Asia Cup 2023)ರಲ್ಲಿ ಭಾರತ-ಎ (India- A) ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇಂದು ( ಶುಕ್ರವಾರ) ತನ್ನ ಮೊದಲ ಪಂದ್ಯದಲ್ಲಿ ಯುಎಇ-ಎ ತಂಡವನ್ನು ಎದುರಿಸಿದ ಟೀಂ ಇಂಡಿಯಾ ನಾಯಕ ಯಶ್ ಧುಲ್ (Yash Dhull) ಅವರ ಸ್ಫೋಟಕ ಶತಕದ ನೆರವಿನಿಂದಾಗಿ ಕೇವಲ 27 ಓವರ್​ಗಳಲ್ಲೇ 8 ವಿಕೆಟ್​ಗಳಿಂದ ಗೆಲುವಿನ ದಡ ಸೇರಿತು. ಯುಎಇ- ಎ ನೀಡಿದ 175 ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಪರ ನಾಯಕನ ಇನ್ನಿಂಗ್ಸ್ ಆಡಿದ ಯಶ್ ಧುಲ್ ಕೇವಲ 84 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 108 ರನ್ ಬಾರಿಸಿದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಯಶ್ ಧುಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್​ಗೆ ಇಳಿದ ಯುಎಇ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಆರಂಭಿಕ ಆಟಗಾರ ಜೊನಾಥನ್ ಫಿಗಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಅಂಶ್ ಟಂಡನ್ ಐದು ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಬಂದ ಲವ್‌ಪ್ರೀತ್ ಬಾಜ್ವಾ ಕೂಡ 2 ರನ್​ಗಳಿಗೆ ಸುಸ್ತಾದರು.

Ranji Trophy: ರಣಜಿಯಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಯಶ್ ಧುಲ್! ಪಂದ್ಯಾವಲಿಯಿಂದ ಹೊರಬಿದ್ದ ದೆಹಲಿ

4 ವಿಕೆಟ್ ಪಡೆದು ಮಿಂಚಿದ ಹರ್ಷಿತ್ ರಾಣಾ

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನಿಂಗ್ಸ್ ಜವಬ್ದಾರಿ ಹೊತ್ತಿದ್ದ ಮತ್ತೊಬ್ಬ ಆರಂಭಿಕ ಆರ್ಯನ್ಶ್ ಶರ್ಮಾ 42 ಎಸೆತಗಳಲ್ಲಿ 7 ಬೌಂಡರಿ ಸಹಿತ 38 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಯುಎಇ ತಂಡ ಕೇವಲ 52 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ನಂತರ ಬಂದ ನಾಯಕ ಅಶ್ವಂತ್ ವಾಲ್ತಾಪ 46 ರನ್​ಗಳ ಜವಬ್ದಾರಿಯುತ ಇನ್ನಿಂಗ್ಸ್ ಆಡಿದರೆ,ಕೆಳ ಕ್ರಮಾಂಕದಲ್ಲಿ ಮುಹಮ್ಮದ್ ಫರಾಜುದ್ದೀನ್ 35 ರನ್​ಗಳ ಹೋರಾಟದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಸಂಪೂರ್ಣ 50 ಓವರ್​ಗಳನ್ನು ಆಡಿದ ಯುಎಇ 9 ವಿಕೆಟ್​ಗಳನ್ನು ಕಳೆದುಕೊಂಡು 175 ರನ್ ಕಲೆಹಾಕಿತು. ಟೀಂ ಇಂಡಿಯಾ ಪರ ಹರ್ಷಿತ್ ರಾಣಾ 4 ವಿಕೆಟ್ ಪಡೆದು ಮಿಂಚಿದರೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಮಾನವ್ ಸುತಾರ್ ತಲಾ 2 ವಿಕೆಟ್ ಪಡೆದರು.

ಯಶ್ ಧುಲ್ ಸಿಡಿಲಬ್ಬರದ ಬ್ಯಾಟಿಂಗ್

ಇನ್ನು ಈ ಗುರಿ ಬೆನ್ನಟ್ಟಿದ ಇಂಡಿಯಾ- ಎ ತಂಡದ ಆರಂಭವೂ ಅಷ್ಟು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 23 ರನ್​ಗಳಿಗಿರುವಾಗ ಆರಂಭಿಕ ಸಾಯಿ ಸುದರ್ಶನ್ ವೈಯಕ್ತಿಕ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ ಕೂಡ 19 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ಈ ಎರಡೂ ವಿಕೆಟ್ ಪತನದ ಬಳಿಕ ಇನ್ನಿಂಗ್ಸ್ ಜವಬ್ದಾರಿ ಹೊತ್ತ ನಾಯಕ ಯಶ್ ಧುಲ್ ಸ್ಫೋಟಕ ಬ್ಯಾಟಿಂಗ್​ಗೆ ಮುಂದಾದರು. ಇನ್ನೊಂದೆಡೆ ನಾಯಕ ಯಶ್​ಗೆ ಸೂಪರ್ ಸಾಥ್ ನೀಡಿದ ನಿಖಿನ್ ಜೋಶ್ ಕೂಡ 53 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 41 ರನ್ ಬಾರಿಸಿದರು. ಇತ್ತ ಹೊಡಿಬಡಿ ಬ್ಯಾಟಿಂಗ್ ಮಾಡಿದ ಯಶ್ ಅಜೇಯ ಶತಕದ ಮೂಲಕ ತಂಡಕ್ಕೆ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ನೀಡುವುದರೊಂದಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Fri, 14 July 23