ENG vs AUS: 47 ವರ್ಷಗಳ ಬಳಿಕ ಲಾರ್ಡ್ಸ್‌ ಮೈದಾನದಲ್ಲಿ ಆಸೀಸ್​ಗೆ ಮಣ್ಣು ಮುಕ್ಕಿಸಿದ ಇಂಗ್ಲೆಂಡ್..!

|

Updated on: Jul 09, 2023 | 9:50 AM

ENG vs AUS, Women's Ashes: ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ವನಿತಾ ತಂಡ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.

ENG vs AUS: 47 ವರ್ಷಗಳ ಬಳಿಕ ಲಾರ್ಡ್ಸ್‌ ಮೈದಾನದಲ್ಲಿ ಆಸೀಸ್​ಗೆ ಮಣ್ಣು ಮುಕ್ಕಿಸಿದ ಇಂಗ್ಲೆಂಡ್..!
ಇಂಗ್ಲೆಂಡ್- ಆಸೀಸ್ ವನಿತಾ ತಂಡ
Follow us on

ಒಂದೆಡೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (England vs Australia) ಪುರುಷ ತಂಡಗಳ ನಡುವೆ ಐದು ಪಂದ್ಯಗಳ ಪ್ರತಿಷ್ಠಿತ ಆ್ಯಶಸ್ (Ashes) ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಉಭಯ ದೇಶಗಳ ಮಹಿಳಾ ತಂಡಗಳು ಕೂಡ ಆ್ಯಶಸ್ ಸರಣಿಯಲ್ಲಿ ಮುಖಾಮುಖಿಯಾಗಿವೆ. ಪ್ರಸ್ತುತ ಎರಡೂ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಗೂ ಮುನ್ನ ನಡೆದ ಏಕೈಕ ಟೆಸ್ಟ್ (Test) ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತಾ ತಂಡ ಗೆದ್ದು ಬೀಗಿತ್ತು. ಇದೀಗ ಮೂರು ಪಂದ್ಯಗಳ ಟಿ20 (T20) ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ವನಿತಾ ತಂಡ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಇನ್ನು ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲ್ಲಿದು, ಈ ಸರಣಿ ಗೆದ್ದ ತಂಡ ಆ್ಯಶಸ್ ಸರಣಿ ಗೆಲ್ಲಲಿದೆ.

ಮಹಿಳಾ ಆ್ಯಶಸ್ ಸರಣಿ ಒಟ್ಟಾರೆ ಅಂಕ ಆಧಾರಿತವಾಗಿದ್ದು, ಮೂರು ಮಾದರಿಯ ಕ್ರಿಕೆಟ್​ ಸರಣಿಯಲ್ಲಿ ಅತಿ ಹೆಚ್ಚು ಅಂಕ ಸಂಪಾದಿಸುವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ಸದ್ಯ ಟೆಸ್ಟ್ ಸರಣಿಯನ್ನು ಆಸೀಸ್ ಗೆದ್ದಿದ್ದರೆ, ಟಿ20 ಸರಣಿಯನ್ನು ಇಂಗ್ಲೆಂಡ್ ಗೆದ್ದು ಬೀಗಿದೆ. ಆದರೂ ಉಭಯ ತಂಡಗಳ ಅಂಕ ಸಂಪಾಧನೆಯನ್ನು ನೋಡುವುದಾದರೆ, ಆಸ್ಟ್ರೇಲಿಯಾ 6 ಅಂಕ ಪಡೆದಿದ್ದರೆ, ಇಂಗ್ಲೆಂಡ್ 4 ಅಂಕ ಪಡೆದುಕೊಂಡಿದೆ.

ಇನ್ನು ಲಾರ್ಡ್ಸ್‌ನಲ್ಲಿ ನಡೆದ ಅಂತಿಮ ಟಿ20 ಪಂದ್ಯದ ಬಗ್ಗೆ ಮಾತನಾಡುವುದಾದರೆ, ಸುಮಾರು 8 ದಿನಗಳ ಹಿಂದೆ ಇಂಗ್ಲೆಂಡ್ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಡೇನಿಯಲ್ ಗಿಬ್ಸನ್ 47 ವರ್ಷಗಳ ನಂತರ ಇಂಗ್ಲೆಂಡ್‌ಗೆ ಲಾರ್ಡ್ಸ್‌ನಲ್ಲಿ ಜಯ ತಂದುಕೊಟ್ಟರು.

Ashes 2023: ಆ್ಯಶಸ್​ನಲ್ಲಿ ದಾಖಲೆ ಬರೆದ ಬೆನ್ ಸ್ಟೋಕ್ಸ್; ದಿಗ್ಗಜರ ಸಾಲಿಗೆ ಇಂಗ್ಲೆಂಡ್ ನಾಯಕ..!

47 ವರ್ಷಗಳ ಬಳಿಕ ಗೆಲುವು

ಉಭಯ ತಂಡಗಳ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್‌ ಕಳೆದುಕೊಂಡು 155 ರನ್ ಕಲೆಹಾಕಿತು. ಆದರೆ ಮಳೆ ಪೀಡಿತ ಈ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 14 ಓವರ್‌ಗಳಲ್ಲಿ 119 ರನ್‌ ಕಲೆಹಾಕುವ ಗುರಿ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ಆಂಗ್ಲ ತಂಡವು ಇನ್ನು 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ಮೂಲಕ ಬರೋಬ್ಬರಿ 47 ವರ್ಷಗಳ ಬಳಿಕ ಆಸೀಸ್ ಮಹಿಳಾ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಮಣಿಸಿದ ದಾಖಲೆಯನ್ನು ಇಂಗ್ಲೆಂಡ್ ಮಹಿಳಾ ತಂಡ ನಿರ್ಮಿಸಿದೆ. 4 ಆಗಸ್ಟ್ 1976 ರಂದು ನಡೆದ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಈ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಪಂದ್ಯ ಈ ಮೈದಾನದಲ್ಲಿ ನಡೆದ ಮೊದಲ ಮಹಿಳಾ ಪಂದ್ಯವೂ ಹೌದು.

ಕೊನೆಯ ಓವರ್‌ನ ರೋಚಕತೆ

ಇನ್ನು ಮೂರನೇ ಟಿ 20 ಪಂದ್ಯದ ಕುರಿತು ಮಾತನಾಡುವುದಾದರೆ, ಎಲ್ಲಿಸ್ ಪೇರಿ ಆಸ್ಟ್ರೇಲಿಯಾ ಪರ ಗರಿಷ್ಠ 34 ರನ್ ಗಳಿಸಿದರೆ, ಇಂಗ್ಲೆಂಡ್ ಪರ ಆಲಿಸ್ ಕ್ಯಾಪ್ಸೆ ಗರಿಷ್ಠ 46 ರನ್ ಕಲೆಹಾಕಿದರು. ಕೊನೆಯ 2 ಓವರ್‌ಗಳಲ್ಲಿ ಪಂದ್ಯ ರೋಚಕವಾಯಿತು. ಇಂಗ್ಲೆಂಡ್ ಗೆಲುವಿಗೆ 12 ಎಸೆತಗಳಲ್ಲಿ 8 ರನ್ ಬೇಕಿತ್ತು. ಕೈಯಲ್ಲಿ 7 ವಿಕೆಟ್‌ಗಳಿದ್ದವು. 13ನೇ ಓವರ್​ನ ಮೂರನೇ ಎಸೆತದಲ್ಲಿ ಹೀದರ್ ನೈಟ್ ಬೌಂಡರಿ ಬಾರಿಸಿದರು. ಇದಾದ ಬಳಿಕ ಗೆಲುವಿಗೆ ಕೇವಲ 3 ರನ್‌ಗಳ ಅಗತ್ಯವಿತ್ತು. ನೈಟ್ ಮುಂದಿನ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಆದರೆ ಓವರ್‌ನ 5 ನೇ ಎಸೆತದಲ್ಲಿ ನೇಟ್ ಸೀವರ್ ಔಟಾದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 2 ರನ್‌ಗಳ ಅಗತ್ಯವಿತ್ತು. ಆದರೆ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ನೈಟ್ ಎಲ್ಬಿಡಬ್ಲ್ಯೂ ಆದರು.

ಹಾಗಾಗಿ ಇಂಗ್ಲೆಂಡ್​ಗೆ 5 ಎಸೆತಗಳಲ್ಲಿ 2 ರನ್ ಬೇಕಾಯಿತು. ಆಸೀಸ್ ಈ ಪಂದ್ಯದಲ್ಲಿ ಗೆಲ್ಲಬೇಕೆಂದರೆ 2 ರನ್‌ಗಳನ್ನು ಉಳಿಸಬೇಕಿತ್ತು. ಇಂಗ್ಲೆಂಡ್ ಪರ ಸ್ಟ್ರೈಕ್ ತೆಗೆದುಕೊಂಡಿದ್ದ ಗಿಬ್ಸನ್ ತನ್ನ ವೃತ್ತಿಜೀವನದ ಮೂರನೇ ಪಂದ್ಯವನ್ನಾಡುತ್ತಿದ್ದರು. ಓವರ್‌ನ ಮೊದಲ ಎಸೆತದಲ್ಲಿ ನೈಟ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ ಜೋನಾಸನ್ ದಾಳಿಯಲ್ಲಿದ್ದರು. ಜೋನಾಸನ್ ಎಸೆದ ಓವರ್​ನ ಎರಡನೇ ಚೆಂಡನ್ನು ಗಿಬ್ಸನ್ ಥರ್ಡ್ ಮ್ಯಾನ್ ಕಡೆಗೆ ರಿವರ್ಸ್ ಸ್ವೀಪ್ ಆಡಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:47 am, Sun, 9 July 23