ENG vs NZ: ಕಾನ್ವೆ- ಮಿಚೆಲ್ ಶತಕ; ಆಂಗ್ಲರಿಗೆ 8 ವಿಕೆಟ್​ಗಳ ಸೋಲಿನ ಶಾಕ್ ನೀಡಿದ ಕಿವೀಸ್..!

|

Updated on: Sep 09, 2023 | 10:18 AM

ENG vs NZ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿದ್ದ ಕಿವೀಸ್ ಪಡೆ, ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್‌ಗಳ ಏಕಪಕ್ಷೀಯ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ENG vs NZ: ಕಾನ್ವೆ- ಮಿಚೆಲ್ ಶತಕ; ಆಂಗ್ಲರಿಗೆ 8 ವಿಕೆಟ್​ಗಳ ಸೋಲಿನ ಶಾಕ್ ನೀಡಿದ ಕಿವೀಸ್..!
ಡೆವೊನ್ ಕಾನ್ವೆ ಮತ್ತು ಡ್ಯಾರೆಲ್ ಮಿಚೆಲ್
Follow us on

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿದ್ದ ಕಿವೀಸ್ ಪಡೆ (England vs New Zealand), ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್‌ಗಳ ಏಕಪಕ್ಷೀಯ ಜಯ ಸಾಧಿಸಿದೆ. ಇಂಗ್ಲೆಂಡ್ ನೀಡಿದ್ದ 292 ರನ್​ಗಳ ಸವಾಲನ್ನು ನ್ಯೂಜಿಲೆಂಡ್ 45.4 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಕಿವೀಸ್ ಪರ ಡೆವೊನ್ ಕಾನ್ವೆ (Devon Conway) ಮತ್ತು ಡ್ಯಾರೆಲ್ ಮಿಚೆಲ್ (Daryl Mitchell) ಅಜೇಯ ಗೆಲುವಿನ ಜೊತೆಯಾಟ ನಡೆಸಿ ನ್ಯೂಜಿಲೆಂಡ್‌ಗೆ ಜಯ ತಂದುಕೊಟ್ಟರು. ಇವರಿಬ್ಬರೂ ಮೂರನೇ ವಿಕೆಟ್‌ಗೆ 180 ರನ್‌ಗಳ ಅಜೇಯ ಜೊತೆಯಾಟ ನೀಡಿದರು. ಅಲ್ಲದೆ ಇಬ್ಬರೂ ಅಜೇಯ ಶತಕ ಕೂಡ ಬಾರಿಸಿದರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್​ ಪರ ನಾಲ್ವರ ಅರ್ಧಶತಕ

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಾಲ್ಕು ಅರ್ಧಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 291 ರನ್ ಕಲೆ ಹಾಕಿತು. ತಂಡದ ಪರ ಜೋಸ್ ಬಟ್ಲರ್ 72, ಡೇವಿಡ್ ಮಲಾನ್ 54, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಬೆನ್ ಸ್ಟೋಕ್ಸ್ 52 ರನ್​ಗಳ ಇನ್ನಿಂಗ್ಸ್ ಆಡಿದರು. ಅಲ್ಲದೆ, ಇತರ ಆಟಗಾರರು ಕೂಡ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 3 ವಿಕೆಟ್ ಪಡೆದು ಮಿಂಚಿದರೆ, ನಾಯಕ ಟಿಮ್ ಸೌಥಿ 2 ವಿಕೆಟ್, ಲಾಕಿ ಫರ್ಗುಸನ್ 1 ವಿಕೆಟ್ ಪಡೆದರು.

ENG vs NZ: ಅಲೆನ್ ಸಿಡಿಲಬ್ಬರದ ಬ್ಯಾಟಿಂಗ್‌; ಆಂಗ್ಲರನ್ನು 74 ರನ್​ಗಳಿಂದ ಮಣಿಸಿದ ನ್ಯೂಜಿಲೆಂಡ್

ಕಾನ್ವೆ- ಮಿಚೆಲ್ ದಾಖಲೆಯ ಜೊತೆಯಾಟ

ಇಂಗ್ಲೆಂಡ್ ನೀಡಿದ 292 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಭರವಸೆಯ ಆರಂಭ ಪಡೆಯಿತು. ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ವಿಲ್ ಯಂಗ್ ಇಬ್ಬರೂ 61 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ವಿಲ್ ಯಂಗ್ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕಾನ್ವೆ ಎರಡನೇ ವಿಕೆಟ್‌ಗೆ ಹೆನ್ರಿ ನಿಕೋಲಸ್ ಜೊತೆ 54 ರನ್ ಜೊತೆಯಾಟ ನಡೆಸಿದರು. ಆದರೆ ನಿಕೋಲಸ್ ಕೂಡ 26 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಡ್ಯಾರೆಲ್ ಮಿಚೆಲ್ ಹಾಗೂ ಡೆವೊನ್ ಕಾನ್ವೇ ಜೋಡಿ 157 ಎಸೆತಗಳಲ್ಲಿ ಅಜೇಯ 180 ರನ್​ಗಳ ಜೊತೆಯಾಟ ನಡೆಸಿದರು. ಈ ಇಬ್ಬರೂ ಇಂಗ್ಲೆಂಡ್ ಬೌಲರ್​ಗಳ ಬೆಂಡೆತ್ತುವುದರೊಂದಿಗೆ ವೈಯಕ್ತಿಕವಾಗಿ ಶತಕಗಳನ್ನೂ ಪೂರೈಸಿದರು.

ಡ್ಯಾರೆಲ್ ಮಿವೆಲ್ 91 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 118 ರನ್ ಗಳಿಸಿದರೆ, ಕಾನ್ವೆ 121 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ ಔಟಾಗದೆ 111 ರನ್ ಕಲೆ ಹಾಕಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ಮತ್ತು ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ