ENG vs WI: ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ; ಇಂಗ್ಲೆಂಡ್ ತಂಡದಿಂದ 9 ಆಟಗಾರರಿಗೆ ಗೇಟ್​ಪಾಸ್..!

ENG vs WI: ವಾಸ್ತವವಾಗಿ ವಿಶ್ವಕಪ್ ಮುಗಿಸಿ ತವರಿಗೆ ವಾಪಸ್ಸಾಗಿರುವ ಇಂಗ್ಲೆಂಡ್ ತಂಡ, ಇದೀಗ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಈ ಪ್ರವಾಸಕ್ಕಾಗಿ ಏಕದಿನ ಮತ್ತು ಟಿ20 ತಂಡಗಳನ್ನು ಪ್ರಕಟಿಸಿದೆ. ಈ ಎರಡೂ ಸರಣಿಗಳಿಗೆ ಆಯ್ಕೆಯಾದ ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ವಿಶ್ವಕಪ್‌ಗೆ ಆಯ್ಕೆಯಾಗಿದ್ದ ತಂಡದಿಂದ ಒಂಬತ್ತು ಆಟಗಾರರನ್ನು ಏಕದಿನ ತಂಡದಿಂದ ಹೊರಗಿಡಲಾಗಿದೆ.

ENG vs WI: ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ; ಇಂಗ್ಲೆಂಡ್ ತಂಡದಿಂದ 9 ಆಟಗಾರರಿಗೆ ಗೇಟ್​ಪಾಸ್..!
ಇಂಗ್ಲೆಂಡ್ ತಂಡ

Updated on: Nov 12, 2023 | 5:32 PM

2019 ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ (ICC ODI World Cup 2019) ಚಾಂಪಿಯನ್ ಪಟ್ಟಕ್ಕೇರಿದ್ದ ಇಂಗ್ಲೆಂಡ್ ತಂಡ (England Cricket Team), ಭಾರತದಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದಿರಲಿ, ಸೆಮಿಫೈನಲ್​ಗೂ ಪ್ರವೇಶ ಪಡೆಯಲಿಲ್ಲ. ಈ ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳನ್ನಾಡಿದ್ದ ಬಟ್ಲರ್ ಪಡೆ ಕೇವಲ ಮೂರು ಪಂದ್ಯಗಳನ್ನು ಗೆದ್ದು ವಿಶ್ವಕಪ್ ಗೆಲ್ಲಲು ಸಾಧ್ಯವಾಗದಿದ್ದರೂ, 2025 ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ನಡುವೆ ಕಳಪೆ ಪ್ರದರ್ಶನ ನೀಡಿ ವಿಶ್ವಕಪ್​ನಿಂದ ಹೊರಬಿದ್ದು, ತವರಿಗೆ ಮರಳಿದ್ದ ಇಂಗ್ಲೆಂಡ್‌ ತಂಡದಲ್ಲಿ ವಿಶ್ವಕಪ್ ಬಳಿಕ ಪ್ರಮುಖ ಬದಲಾವಣೆಗಳಾಗಿವೆ. ವಾಸ್ತವವಾಗಿ ವಿಶ್ವಕಪ್ ಮುಗಿಸಿ ತವರಿಗೆ ವಾಪಸ್ಸಾಗಿರುವ ಇಂಗ್ಲೆಂಡ್ ತಂಡ, ಇದೀಗ ವೆಸ್ಟ್ ಇಂಡೀಸ್ (England vs West Indies) ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಈ ಪ್ರವಾಸಕ್ಕಾಗಿ ಏಕದಿನ ಮತ್ತು ಟಿ20 ತಂಡಗಳನ್ನು ಪ್ರಕಟಿಸಿದೆ. ಈ ಎರಡೂ ಸರಣಿಗಳಿಗೆ ಆಯ್ಕೆಯಾದ ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ವಿಶ್ವಕಪ್‌ಗೆ ಆಯ್ಕೆಯಾಗಿದ್ದ ತಂಡದಿಂದ ಒಂಬತ್ತು ಆಟಗಾರರನ್ನು ಏಕದಿನ ತಂಡದಿಂದ ಹೊರಗಿಡಲಾಗಿದೆ.

ಆರು ಆಟಗಾರರಿಗೆ ಮಾತ್ರ ಅವಕಾಶ

ವಿಶ್ವಕಪ್ ಆಡಿದ ಇಂಗ್ಲೆಂಡ್ ತಂಡದ ಆರು ಆಟಗಾರರನ್ನು ಮಾತ್ರ ಏಕದಿನ ಸರಣಿಗೆ ಉಳಿಸಿಕೊಳ್ಳಲಾಗಿದೆ. ಈ ಪೈಕಿ ನಾಯಕ ಬಟ್ಲರ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟನ್, ಗಸ್ ಎಟಿಂಗ್ಸನ್, ಬ್ರೇಡನ್ ಕಾರ್ಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಉಳಿದ ಆಟಗಾರರನ್ನು ಕಿಕ್ ಔಟ್ ಮಾಡಲಾಗಿದೆ. ಏಕದಿನ ತಂಡದಲ್ಲಿ ಆರು ಆಟಗಾರರನ್ನು ಉಳಿಸಿಕೊಳ್ಳಲಾಗಿದೆ ಆದರೆ ಆಯ್ಕೆಯಾಗದ ಆಟಗಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಸಿಬಿ ಹೊರಡಿಸಿದ ಹೇಳಿಕೆ ತಿಳಿಸಿದೆ.

ಈ ಆಟಗಾರರಿಗೆ ಗೇಟ್​ಪಾಸ್

ಹೊರಬಿದ್ದಿರುವ ಆಟಗಾರರಲ್ಲಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೆಸರೂ ಸೇರಿದ್ದು, ನಾಯಕ ಬಟ್ಲರ್ ಅವರ ಸೂಚನೆ ಮೇರೆಗೆ ವಿಶ್ವಕಪ್​ಗೂ ಮುನ್ನ ಏಕದಿನ ಮಾದರಿಯಿಂದ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದಿದ್ದರು. ಅವರಲ್ಲದೆ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಕೂಡ ತಂಡದಲ್ಲಿ ಅವಕಾಶ ಪಡೆದಿಲ್ಲ. ಇವರಲ್ಲದೆ, ಆರಂಭಿಕರಾದ ಡೇವಿಡ್ ಮಲಾನ್, ಜೋ ರೂಟ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಆದಿಲ್ ರಶೀದ್, ರೀಸ್ ಟೋಪ್ಲಿ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಉಳಿದಂತೆ ಡೇವಿಡ್ ವಿಲ್ಲಿ ಈ ಏಕದಿನ ವಿಶ್ವಕಪ್ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. ಆದ್ದರಿಂದ ಅವರ ಹೆಸರೂ ಈ ತಂಡದಲ್ಲಿಲ್ಲ. ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಹೊಸ ಮುಖಗಳೆಂದರೆ ಜೋಶ್ ಟಂಗ್ ಮತ್ತು ಜಾನ್ ಟರ್ನರ್. ಇವರಿಬ್ಬರೂ ಏಕದಿನ ಹಾಗೂ ಟಿ20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

ಈ ಆಟಗಾರರಿಗೆ ಅವಕಾಶ

ಹೊಸದಾಗಿ ತಂಡದಲ್ಲಿ ಆಯ್ಕೆಯಾಗಿರುವ ಆಟಗಾರರಲ್ಲಿ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್, ಜಾಕ್ ಕ್ರೌಲಿ, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಓಲಿ ಪೋಪ್, ಫಿಲ್ ಸಾಲ್ಟ್ ಸೇರಿದ್ದಾರೆ. ರೆಹಾನ್, ಡಕೆಟ್, ವಿಲ್ ಜಾಕ್ಸ್, ಫಿಲ್ ಸಾಲ್ಟ್, ಟಂಗ್, ಟರ್ನರ್ ಕೂಡ ಟಿ20ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದ ಮೊಯಿನ್ ಅಲಿ, ಆದಿಲ್ ರಶೀದ್, ವೋಕ್ಸ್ ಮತ್ತು ಟೋಪ್ಲಿ ಅವರಿಗೆ ಟಿ20ಯಲ್ಲಿ ಸ್ಥಾನ ನೀಡಲಾಗಿದೆ

ವೇಳಾಪಟ್ಟಿ ಹೀಗಿದೆ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಾಗಿದೆ. ಡಿಸೆಂಬರ್ 3 ರಂದು ಏಕದಿನ ಸರಣಿ ಆರಂಭವಾಗಲಿದೆ. ಎರಡನೇ ಪಂದ್ಯ ಡಿಸೆಂಬರ್ 6 ರಂದು ನಡೆಯಲಿದೆ. ಈ ಎರಡೂ ಪಂದ್ಯಗಳು ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಡಿಸೆಂಬರ್ 9 ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯು ಡಿಸೆಂಬರ್ 12 ರಂದು ಬಾರ್ಬಡೋಸ್‌ನಲ್ಲಿ ಆರಂಭವಾಗಲಿದೆ. ಎರಡನೇ ಮತ್ತು ಮೂರನೇ ಪಂದ್ಯಗಳು ಡಿಸೆಂಬರ್ 14 ಮತ್ತು 16 ರಂದು ಗ್ರಾನಡಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳು ಡಿಸೆಂಬರ್ 19 ಮತ್ತು 21 ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಗಸ್ ಎಟಿಂಗ್ಸನ್, ಹ್ಯಾರಿ ಬ್ರೂಕ್, ಬ್ರೇಡೆನ್ ಕರ್ಸ್, ಜಾಕ್ ಕ್ರೌಲಿ, ಸ್ಯಾಮ್ ಕರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಲಿಯಾಮ್ ಲಿಂಗ್ವಿಂಗ್ಸ್ಟನ್, ಓಲ್ಲಿ ಪೋಪ್, ಫಿಲ್ ಸಾಲ್ಟ್, ಜೋಶ್ ಟಂಗ್, ಜಾನ್ ಟರ್ನರ್.

ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಮೊಯಿನ್ ಅಲಿ, ಗಸ್ ಎಟಿಂಗ್ಸನ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ರೀಸ್ ಟೋಪ್ಲಿ, ಜಾನ್ ಟರ್ನರ್, ಕ್ರಿಸ್ ವೋಕ್ಸ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Sun, 12 November 23