U19 Asia Cup 2025: ಮೊಹ್ಸಿನ್ ನಖ್ವಿಗೆ ಮತ್ತೆ ಮುಖಭಂಗ; ಪದಕ ಸ್ವೀಕರಿಸದ ಟೀಂ ಇಂಡಿಯಾ
India Refuses Mohsin Naqvi: ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ಗೆದ್ದಿದ್ದರೂ, ಟೀಂ ಇಂಡಿಯಾ ಇಂದಿಗೂ ಟ್ರೋಫಿ ಸ್ವೀಕರಿಸಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ಭಾರತ ನಿರಾಕರಿಸಿದ್ದೇ ಇದಕ್ಕೆ ಕಾರಣ. ಇದೀಗ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಯುವ ಆಟಗಾರರು ನಖ್ವಿ ಕೈನಿಂದ ಪದಕಗಳನ್ನು ಸ್ವೀಕರಿಸಿಲ್ಲ.

ಸೆಪ್ಟೆಂಬರ್ 28 ರಂದು ನಡೆದಿದ್ದ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಕೈನಿಂದ ಟ್ರೋಫಿ ಪಡೆಯಲು ನಿರಾಕರಿಸಿತು. ಇದರ ಪರಿಣಾಮವಾಗಿ ಇದುವರೆಗೂ ಟೀಂ ಇಂಡಿಯಾಗೆ ಏಷ್ಯಾಕಪ್ ಟ್ರೋಫಿ ಸಿಕ್ಕಿಲ್ಲ. ಈಗಲೂ ನಖ್ವಿ ಹಾಗೂ ಬಿಸಿಸಿಐ ನಡುವೆ ಈ ಬಗ್ಗೆ ಪ್ರತಿಷ್ಠಯೆ ಹೋರಾಟ ಮುಂದುವರೆದಿದೆ. ಇದೀಗ ಅಂಡರ್-19 ಏಷ್ಯಾಕಪ್‌ನಲ್ಲೂ (U19 Asia Cup) ಭಾರತದ ಯುವ ಪಡೆ ಮೊಹ್ಸಿನ್ ನಖ್ವಿ ಕೈನಿಂದ ಪದಕ ಪಡೆಯಲು ನಿರಾಕರಿಸಿದೆ. ಇದರ ಪರಿಣಾಮವಾಗಿ ನಖ್ವಿ ಬದಲು ಅಸೋಸಿಯೇಟ್ ಸದಸ್ಯರ ಅಧ್ಯಕ್ಷ ಮುಬಾಸಿರ್ ಉಸ್ಮಾನಿ ಟೀಂ ಇಂಡಿಯಾ ಆಟಗಾರರಿಗೆ ಪದಕ ನೀಡಿದ್ದಾರೆ.
ಏಷ್ಯಾಕಪ್ ಫೈನಲ್ ಸೋತ ಭಾರತ
ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ, ಭಾರತ ತಂಡವನ್ನು 191 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಭಾರತಕ್ಕೆ 348 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ, ಟೀಂ ಇಂಡಿಯಾ 156 ರನ್‌ಗಳನ್ನು ಆಲ್ ಔಟ್ ಆಯಿತು. ವಾಸ್ತವವಾಗಿ ಬಹುರಾಷ್ಟ್ರೀಯ ಸ್ಪರ್ಧೆಯ ಫೈನಲ್ ಪಂದ್ಯದ ನಂತರ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಪದಕಗಳನ್ನು ನೀಡಲಾಗುತ್ತದೆ. ಆ ಪ್ರಕಾರ, ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರಿಗೆ ಪದಕ ನೀಡಲಾಯಿತು.
U19 Asia Cup 2025: ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಸೋತ ಟೀಂ ಇಂಡಿಯಾ
ನಖ್ವಿ ಕೈನಿಂದ ಪದಕ ಪಡೆಯದ ಯಂಗ್ ಇಂಡಿಯಾ
ವಾಸ್ತವವಾಗಿ ಈ ಪದಕಗಳನ್ನು ಉಭಯ ತಂಡಗಳ ಆಟಗಾರರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು ನೀಡುವುದು ವಾಡಿಕೆ. ಹೀಗಾಗಿ ಪ್ರಸ್ತುತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಮೊಹ್ಸಿನ್ ನಖ್ವಿ ಅವರು ಆಟಗಾರರಿಗೆ ಪದಕ ನೀಡಬೇಕಾಗಿತ್ತು. ಆದರೆ ಟೀಂ ಇಂಡಿಯಾ ಆಟಗಾರರಿಗೆ ಪದಕಗಳನ್ನು ನೀಡುವ ಸರದಿ ಬಂದಾಗ, ಮೊಹ್ಸಿ ನಖ್ವಿ ಭಾರತದ ಆಟಗಾರರಿಗೆ ಪದಕಗಳನ್ನು ನೀಡಲಿಲ್ಲ. ನಖ್ವಿ ಬದಲಾಗಿ ಐಸಿಸಿ ಅಸೋಸಿಯೇಟ್ ಸದಸ್ಯರ ಅಧ್ಯಕ್ಷ ಮುಬಾಸಿರ್ ಉಸ್ಮಾನಿ ಅವರು ಟೀಂ ಇಂಡಿಯಾ ಆಟಗಾರರಿಗೆ ಪದಕಗಳನ್ನು ನೀಡಿದರು. ಇದಾದ ಬಳಿಕ ಮೊಹ್ಸಿನ್ ನಖ್ವಿ ಚಾಂಪಿಯನ್ ಪಾಕಿಸ್ತಾನ ತಂಡಕ್ಕೆ ಟ್ರೋಫಿಯನ್ನು ಪ್ರದಾನ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
