IND vs ENG: ಮ್ಯಾಂಚೆಸ್ಟರ್ ಟೆಸ್ಟ್‌ಗೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್; ತಂಡದಲ್ಲಿ 1 ಬದಲಾವಣೆ
England Announces Playing XI for 4th Tes: ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಲಾರ್ಡ್ಸ್ ಪಂದ್ಯದಲ್ಲಿ ಗಾಯಗೊಂಡ ಶೋಯೆಬ್ ಬಶೀರ್ ಬದಲಿಗೆ ಎಡಗೈ ಸ್ಪಿನ್ ಆಲ್‌ರೌಂಡರ್ ಲಿಯಾಮ್ ಡಾಸನ್ ಅವರು ತಂಡ ಸೇರಿದ್ದಾರೆ. ಡಾಸನ್ ಅವರ ಮರಳುವಿಕೆ ಇಂಗ್ಲೆಂಡ್‌ಗೆ ಬಲ ನೀಡಲಿದೆ. ಕಳಪೆ ಪ್ರದರ್ಶನ ಹೊರತಾಗಿಯೂ ಜ್ಯಾಕ್ ಕ್ರೌಲಿ, ಓಲಿ ಪೋಪ್ ಮತ್ತು ಕ್ರಿಸ್ ವೋಕ್ಸ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಡಾಸನ್ 8 ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇದೇ ಜುಲೈ 23 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಒಂದೆಡೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಸರಣಿ ಅದರ ಕೈ ಸೇರಲಿದೆ. ಇತ್ತ ಭಾರತ ಗೆದ್ದರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ. ಹೀಗಾಗಿ ಎರಡೂ ತಂಡಗಳಿಗೆ ಈ ಪಂದ್ಯ ನಿರ್ಣಾಯಕ ಕದನವಾಗಿದೆ. ಈ ನಡುವೆ ಈ ಪಂದ್ಯಕ್ಕೆ ಇನ್ನು 2 ದಿನ ಇರುವಾಗಲೇ ಇಂಗ್ಲೆಂಡ್ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು (England Playing XI) ಪ್ರಕಟಿಸಿದೆ. ವಾಸ್ತವವಾಗಿ ಇಂಗ್ಲೆಂಡ್ ತಂಡ ಪಂದ್ಯಕ್ಕೆ ಇನ್ನೊಂದು ದಿನ ಇರುವಾಗ ತನ್ನ ತಂಡವನ್ನು ಪ್ರಕಟಿಸುತ್ತಿತ್ತು. ಆದರೆ ಈ ಬಾರಿ ಪಂದ್ಯಕ್ಕೆ ಇನ್ನು 2 ದಿನ ಮುಂಚಿತವಾಗಿಯೇ ಪ್ಲೇಯಿಂಗ್ 11 ಘೋಷಿಸಿದೆ.
ಇಂಗ್ಲೆಂಡ್ ಪ್ರಕಟಿಸಿರುವ ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಗಾಯಗೊಂಡು ಇಡೀ ಸರಣಿಯಿಂದಲೇ ಹೊರಬಿದ್ದಿರುವ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಬದಲಿಗೆ ಇಂಗ್ಲೆಂಡ್ ಆಯ್ಕೆದಾರರು ಎಡಗೈ ಸ್ಪಿನ್ ಆಲ್‌ರೌಂಡರ್ ಲಿಯಾಮ್ ಡಾಸನ್ ಅವರನ್ನು ನಾಲ್ಕನೇ ಮತ್ತು ಐದನೇ ಟೆಸ್ಟ್‌ಗೆ ತಂಡದಲ್ಲಿ ಆಯ್ಕೆ ಮಾಡಿದ್ದಾರೆ.
ತಂಡದಲ್ಲಿ ಸ್ಥಾನ ಪಡೆದ ಡಾಸನ್
ಇಂಗ್ಲೆಂಡ್ ಆಡುವ ಹನ್ನೊಂದರ ಬಳಗದಲ್ಲಿ ಡಾಸನ್ ರೂಪದಲ್ಲಿ ಕೇವಲ ಒಂದು ಬದಲಾವಣೆಯನ್ನು ಮಾಡಿದೆ. ಅಂದರೆ, ಕಳಪೆ ಫಾರ್ಮ್ ಹೊರತಾಗಿಯೂ, ಆರಂಭಿಕ ಜ್ಯಾಕ್ ಕ್ರೌಲಿ, ಉಪನಾಯಕ ಓಲಿ ಪೋಪ್ ಮತ್ತು ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಲಿಯಾಮ್ ಡಾಸನ್ ಕನ್ನಡಿಗ ಕರುಣ್ ನಾಯರ್ ಅವರಂತೆಯೇ ಬರೋಬ್ಬರಿ 8 ವರ್ಷಗಳ ನಂತರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ 11
Our XI for the fourth Test is here 📋
One change from Lord’s 👊
— England Cricket (@englandcricket) July 21, 2025
8 ವರ್ಷಗಳ ನಂತರ ಸ್ಥಾನ
ನಾಯರ್ ಅವರಂತೆ, ಡಾಸನ್ ಕೂಡ 2016 ರ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದರು. ಆದರೆ 3 ಪಂದ್ಯಗಳ ನಂತರ ಅವರನ್ನು 2017 ರಲ್ಲಿ ತಂಡದಿಂದ ಕೈಬಿಡಲಾಯಿತು. ಇದಾದ ನಂತರ, ಈ ಇಂಗ್ಲೆಂಡ್ ಸರಣಿಯಿಂದ ನಾಯರ್ ಕಮ್ ಬ್ಯಾಕ್ ಮಾಡಿದಂತೆಯೇ, ಈ ಇಂಗ್ಲಿಷ್ ಸ್ಪಿನ್ನರ್ ಕೂಡ ಎರಡನೇ ಅವಕಾಶವನ್ನು ಪಡೆದುಕೊಂಡಿದ್ದಾರೆ. ಡಾಸನ್ 3 ಟೆಸ್ಟ್‌ಗಳಲ್ಲಿ ಕೇವಲ 84 ರನ್ ಗಳಿಸುವುದರ ಜೊತೆಗೆ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಡಾಸನ್ ಅವರ ಪ್ರಥಮ ದರ್ಜೆ ಕ್ರಿಕೆಟ್ ಬಗ್ಗೆ ಹೇಳುವುದಾದರೆ, 212 ಪಂದ್ಯಗಳನ್ನಾಡಿರುವ ಅವರು 10731 ರನ್ ಬಾರಿಸಿದ್ದಾರೆ. ಇದರಲ್ಲಿ 18 ಶತಕಗಳು ಸೇರಿವೆ. ಇದರ ಜೊತೆಗೆ, ಬೌಲಿಂಗ್ನಲ್ಲಿ 371 ವಿಕೆಟ್‌ಗಳನ್ನು ಪಡೆದಿರುವ ಅವರು 15 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ.
IND vs ENG: ಮ್ಯಾಂಚೆಸ್ಟರ್ನಲ್ಲಿ ಇಮ್ರಾನ್ ಖಾನ್ ದಾಖಲೆಯನ್ನು ಮುರಿಯುತ್ತಾರಾ ಬುಮ್ರಾ?
ಇಂಗ್ಲೆಂಡ್ ಪ್ಲೇಯಿಂಗ್-11: ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರೌಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್, ಲಿಯಾಮ್ ಡಾಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್ ಮತ್ತು ಜೋಫ್ರಾ ಆರ್ಚರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:27 pm, Mon, 21 July 25
