AUS vs ENG: ಒಂದಕ್ಕಿಂಗೆ ಸುಸ್ತಾದ 6 ಬ್ಯಾಟರ್ಸ್​! 11 ವರ್ಷಗಳ ಬಳಿಕ ಕಾಂಗರೂಗಳಿಗೆ ತವರಿನಲ್ಲೇ ಮುಖಭಂಗ

| Updated By: ಪೃಥ್ವಿಶಂಕರ

Updated on: Oct 09, 2022 | 7:43 PM

AUS vs ENG: ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ 11 ವರ್ಷಗಳ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಅಂತರಾಷ್ಟ್ರೀಯ ಟಿ20 ಪಂದ್ಯ ಗೆದ್ದ ದಾಖಲೆ ಬರೆದಿದೆ.

AUS vs ENG: ಒಂದಕ್ಕಿಂಗೆ ಸುಸ್ತಾದ 6 ಬ್ಯಾಟರ್ಸ್​! 11 ವರ್ಷಗಳ ಬಳಿಕ ಕಾಂಗರೂಗಳಿಗೆ ತವರಿನಲ್ಲೇ ಮುಖಭಂಗ
Australia vs England
Follow us on

ಟಿ20 ವಿಶ್ವಕಪ್ (T20 World Cup ) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಚುಟುಕು ಸಮರಕ್ಕಾಗಿ ಹೆಚ್ಚಿನ ತಂಡಗಳು ಈಗಾಗಲೇ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಿವೆ. ಇದರಿಂದಾಗಿ ಆ ತಂಡಗಳ ಆಟಗಾರರು ಪಂದ್ಯಾವಳಿಗೂ ಮೊದಲು ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವುದು ಅವರ ಪ್ಲಾನ್ ಆಗಿದೆ. ಆದರೆ ಪಂದ್ಯಾವಳಿಯ ಪ್ರಾರಂಭದ ಮೊದಲು, ಆತಿಥೇಯ ತಂಡ ಸ್ವತಃ ತವರು ನೆಲದಲ್ಲೇ ಹೀನಾಯ ಸೋಲನುಭವಿಸಿದೆ. ಪರ್ತ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು 8 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ.

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ 11 ವರ್ಷಗಳ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಅಂತರಾಷ್ಟ್ರೀಯ ಟಿ20 ಪಂದ್ಯ ಗೆದ್ದ ದಾಖಲೆ ಬರೆದಿದೆ. ಕೊನೆಯ ಹಂತದವರೆಗೂ ಗೆಲುವಿನ ಸನಿಹದಲ್ಲಿದ್ದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಕೊನೆಯ ಓವರ್‌ನ 5 ಎಸೆತಗಳಲ್ಲಿ ದಿಕ್ಕು ತಪ್ಪಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್ ಗಳಿಸಿತು. ಅಲೆಕ್ಸ್ ಹೇಲ್ಸ್ 51 ಎಸೆತಗಳಲ್ಲಿ 84 ರನ್ ಗಳಿಸಿದರೆ, ನಾಯಕ ಜೋಸ್ ಬಟ್ಲರ್ 32 ಎಸೆತಗಳಲ್ಲಿ 68 ರನ್ ಗಳಿಸಿದರು. ಇಂಗ್ಲೆಂಡ್ ನೀಡಿದ 209 ರನ್‌ಗಳ ಗುರಿಗೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಟ ಬದಲಿಸಿದ ಕೊನೆಯ ಓವರ್‌

ವಾಸ್ತವವಾಗಿ 19ನೇ ಓವರ್‌ ಅಂತ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತ್ತು. ಹೀಗಾಗಿ ಆಸೀಸ್ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿತ್ತು. ಮ್ಯಾಥ್ಯೂ ವೇಡ್ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಓವರ್​ಗೆ ಉತ್ತಮ ಆರಂಭ ನೀಡಿದರು. ಆದರೆ ಬೌಂಡರಿ ತಿಂದ ಕರನ್ ಕೊನೆಯ 5 ಎಸೆತಗಳಲ್ಲಿ ಮ್ಯಾಜಿಕ್ ಮಾಡಿದರು.

ಓವರ್‌ನ ಎರಡನೇ ಎಸೆತ ಡಾಟ್ ಬಾಲ್ ಆಯಿತು. ಮೂರನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ವೇಡ್, ಡೀಪ್ ಮಿಡ್ ವಿಕೆಟ್‌ನಲ್ಲಿ ಬಾಲನ್ನು ಆಡಿದರು. ಆದರೆ ಅಲ್ಲೆ ನಿಂತಿದ್ದ ಬೆನ್ ಸ್ಟೋಕ್ಸ್ ಉತ್ತಮ ಕ್ಯಾಚ್ ಪಡೆದರು. ಬಳಿಕ ನಾಲ್ಕನೇ ಎಸೆತದಲ್ಲಿ ಲೆಗ್ ಬೈನಿಂದ ರನ್ ಸಿಕ್ಕಿತು. ಇದಾದ ಬಳಿಕ ಆಸ್ಟ್ರೇಲಿಯಾ ಗೆಲುವಿಗೆ 2 ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿತ್ತು.

ಒಂದಕ್ಕಿಂಗೆ ಸುಸ್ತಾದ 6 ಬ್ಯಾಟ್ಸ್‌ಮನ್‌ಗಳು

ಹೀಗಾಗಿ ಕೊನೆಯ 2 ಎಸೆತಗಳನ್ನು ಎದುರಿಸಲು ನಾಥನ್ ಎಲ್ಲಿಸ್ ಮತ್ತು ಕೇನ್ ರಿಚರ್ಡ್ಸನ್ ಕ್ರೀಸ್‌ನಲ್ಲಿದ್ದರು. ಒಂದೇ ಒಂದು ಬಿಗ್ ಶಾಟ್ ಇಂಗ್ಲೆಂಡ್​ಗೆ ಸೋಲಿನ ಆಘಾತ ನೀಡುವಂತಿತ್ತು. ಆದರೆ ಓವರ್‌ನ 5 ನೇ ಎಸೆತದಲ್ಲಿ ಕರನ್ ಎಲ್ಲಿಸ್ ಅವರನ್ನು ಬೌಲ್ಡ್ ಮಾಡಿ ಇಂಗ್ಲೆಂಡ್‌ನ ಗೆಲುವನ್ನು ನಿರ್ಧರಿಸಿದರು. ಕೊನೆಯ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಸ್ವೀಪ್ಸನ್ ಆಸ್ಟ್ರೇಲಿಯಾದ ಸೋಲಿನ ಅಂತರವನ್ನು ತಗ್ಗಿಸಿದರು. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸೋಲಿಗೆ ಪ್ರಮುಖ ಕಾರಣ ತಂಡದ 6 ಬ್ಯಾಟ್ಸ್‌ಮನ್‌ಗಳು. ಏಕೆಂದರೆ ಈ 6 ಬ್ಯಾಟ್ಸ್​ಮನ್​ಗಳು ಎರಡಂಕಿ ದಾಟಲು ಸಾಧ್ಯವಾಗದೆ ಕಳಪೆ ಬ್ಯಾಟಿಂಗ್ ನಡೆಸಿದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಡೇವಿಡ್ ವಾರ್ನರ್ ಗರಿಷ್ಠ 73 ರನ್ ಗಳಿಸಿದರು. ಇಂಗ್ಲೆಂಡ್ ಪರ ಮಾರ್ಕ್​ವುಡ್ 3, ಸ್ಯಾಮ್ ಕರನ್ 2 ವಿಕೆಟ್ ಪಡೆದರು.

Published On - 7:43 pm, Sun, 9 October 22