
ಪ್ರಸ್ತುತ ಭಾರತದಲ್ಲಿ ಏಕದಿನ ವಿಶ್ವಕಪ್ (ICC ODI World Cup 2023) ನಡೆಯುತ್ತಿದ್ದು, ಈ ನಡುವೆ 2025 ರಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಬಗ್ಗೆ ಐಸಿಸಿ ಬಿಗ್ ಅಪ್ಡೇಟ್ ನೀಡಿದೆ. ಐಸಿಸಿ (ICC) ನೀಡಿರುವ ಮಾಹಿತಿ ಪ್ರಕಾರ ವಿಶ್ವಕಪ್‌ನಲ್ಲಿ ಲೀಗ್ ಹಂತದ ಅಂತ್ಯದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆಯುವ ತಂಡಗಳು ಪಾಕಿಸ್ತಾನ ಆತಿಥ್ಯ ವಹಿಸುತ್ತಿರುವ ಚಾಂಪಿಯನ್ಸ್ ಟ್ರೋಫಿಯನ್ನು ಆಡಲಿವೆ. ಪಾಕಿಸ್ತಾನ ಈಗಾಗಲೇ ಆತಿಥೇಯರಾಗಿ ಅರ್ಹತೆ ಪಡೆದಿದ್ದು, ವಿಶ್ವಕಪ್‌ನಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲ್ಲಿವೆ. ಇದರರ್ಥ ಪ್ರಸ್ತುತ ವಿಶ್ವಕಪ್ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಇಂಗ್ಲೆಂಡ್ (England) ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳುವ ಸಾಧ್ಯತೆ ಇದೆ.
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ 8 ತಂಡಗಳು ಈ ವಿಶ್ವಕಪ್‌ನಿಂದ ನಿರ್ಧರಿಸಲ್ಪಡುತ್ತವೆ ಎಂದು ಐಸಿಸಿ ಹೇಳಿದೆ. 8 ತಂಡಗಳ ಪಂದ್ಯಾವಳಿಯನ್ನು ಜೂನ್ 2025 ರಲ್ಲಿ ಪಾಕಿಸ್ತಾನದಲ್ಲಿ ಆಯೋಜಿಸಲಾಗುತ್ತದೆ ಎಂದು ಸುದ್ದಿ ವೆಬ್‌ಸೈಟ್ ಕ್ರಿಕ್‌ಇನ್ಫೋ ವರದಿ ಮಾಡಿದೆ.
8 ತಂಡಗಳ ನಡುವೆ ಪಾಕಿಸ್ತಾನದಲ್ಲಿ ನಡೆಯಲ್ಲಿದೆ ಚಾಂಪಿಯನ್ಸ್ ಟ್ರೋಫಿ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ನಂತರ ಪ್ರಸ್ತುತ ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಅಗ್ರ-8 ಸ್ಥಾನಗಳಲ್ಲಿವೆ. ಲೀಗ್ ಹಂತದ ಕೊನೆಯವರೆಗೂ ಈ ತಂಡಗಳು ಅಗ್ರ-8ರಲ್ಲಿ ಉಳಿದರೆ, ನೆದರ್ಲೆಂಡ್ಸ್ ಮತ್ತು ಅಫ್ಘಾನಿಸ್ತಾನ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತವೆ. ಅಂದರೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿದರೆ, ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತನ್ನ ಮುಂದಿನ ಪಂದ್ಯಗಳನ್ನು ಆಸ್ಟ್ರೇಲಿಯಾ, ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ವಿರುದ್ಧ ಆಡಲಿದೆ. ಸದ್ಯ 6 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ 5 ಸೋಲು ಮತ್ತು ಒಂದು ಗೆಲುವಿನಿಂದ ಕೇವಲ 2 ಅಂಕಗಳನ್ನು ಹೊಂದಿದೆ. ಹೀಗಾಗಿ ಇಂಗ್ಲೆಂಡ್ ಅಗ್ರ-8ರಲ್ಲಿ ಸ್ಥಾನ ಪಡೆಯಬೇಕೆಂದರೆ ಉಳಿದಿರುವ 3 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಬೇಕು. ಆದರೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ತಂಡವು ಸೋತಿರುವುದನ್ನು ನೋಡಿದರೆ, ಉಳಿದ 3 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸುವುದು ಆಂಗ್ಲ ತಂಡಕ್ಕೆ ತುಂಬಾ ಕಷ್ಟಕರವಾಗಿದೆ.
ಬಾಂಗ್ಲಾದೇಶ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಲೀಗ್ ಹಂತದ ಅಂತ್ಯದ ನಂತರವೂ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು 9 ಮತ್ತು 10 ನೇ ಸ್ಥಾನದಲ್ಲಿದ್ದರೆ, ಉಭಯ ತಂಡಗಳಿಗೆ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಸಾಧ್ಯವಾಗುವುದಿಲ್ಲ. ಪಾಕಿಸ್ತಾನ ಅಂಕಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಅಗ್ರ-8ರಲ್ಲಿ ಎಲ್ಲಾದರೂ ಸ್ಥಾನ ಪಡೆದರೆ, ಉಳಿದ ಟಾಪ್ 7 ತಂಡಗಳು ಅವರ ಜೊತೆಗೆ ಅರ್ಹತೆ ಪಡೆಯುತ್ತವೆ. ಒಂದು ವೇಳೆ ಪಾಕಿಸ್ತಾನ 9 ಅಥವಾ 10ನೇ ಸ್ಥಾನ ಪಡೆದರೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರ-7 ಸ್ಥಾನದಲ್ಲಿರುವ ತಂಡಗಳು ಅವರೊಂದಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತವೆ.
ಒಂದು ವೇಳೆ ಪಾಕಿಸ್ತಾನ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದು, ಇಂಗ್ಲೆಂಡ್ 8ನೇ ಸ್ಥಾನ, ಬಾಂಗ್ಲಾದೇಶ 9ನೇ ಸ್ಥಾನ ಹಾಗೂ ನೆದರ್ಲೆಂಡ್ಸ್ 7ನೇ ಸ್ಥಾನ ಪಡೆದರೆ, ಈ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಅಗ್ರ-8ರಲ್ಲಿದ್ದರೂ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದೆ. ಆದರೆ ನೆದರ್ಲೆಂಡ್ಸ್ ಅರ್ಹತೆ ಪಡೆಯುತ್ತದೆ. ಪ್ರಸ್ತುತ ನೆದರ್ಲೆಂಡ್ಸ್ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡವು ಇನ್ನೂ ಒಂದು ಪಂದ್ಯವನ್ನು ಗೆದ್ದರೆ ಅದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತದೆ.
ಟೆಸ್ಟ್ ಆಡುವ ರಾಷ್ಟ್ರಗಳಾದ ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲ. ಇದರರ್ಥ ಈಗ ಹೊರಬಿದ್ದಿರುವ ಚಾಂಪಿಯನ್ಸ್ ಟ್ರೋಫಿ ಅರ್ಹತಾ ನಿಯಮಗಳ ಪ್ರಕಾರ ಈ ಮೂರು ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿ ಆಡುವ ಅವಕಾಶ ಕೈತಪ್ಲಿದೆ ಎಂದೇ ಹೇಳಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:26 am, Mon, 30 October 23