ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 5 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ವರ್ಲ್ಡ್ಕಪ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಬಾರಿಯ ರನ್ನರ್ಸ್ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಹೀಗಾಗಿಯೇ ಮೊದಲ ಪಂದ್ಯದಲ್ಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಇಲ್ಲಿ ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಒಳಗೊಂಡಿರುವುದು ಇದೀಗ ಕದನ ಕುತೂಹಲವನ್ನು ಹೆಚ್ಚಿಸಿದೆ. ಏಕೆಂದರೆ ಎರಡೂ ತಂಡಗಳಲ್ಲೂ ಆಲ್ರೌಂಡರ್ಗಳ ದಂಡೇ ಇದ್ದು, ಹೀಗಾಗಿ ರಣರೋಚಕ ಹೋರಾಟವನ್ನು ಎದುರು ನೋಡಬಹುದು.
ಇಂಗ್ಲೆಂಡ್-ನ್ಯೂಝಿಲೆಂಡ್ ಏಕದಿನ ಕ್ರಿಕೆಟ್ನಲ್ಲಿ 95 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಇಂಗ್ಲೆಂಡ್ 45 ಬಾರಿ ಜಯ ಸಾಧಿಸಿದರೆ, ನ್ಯೂಝಿಲೆಂಡ್ 44 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 2 ಪಂದ್ಯ ಟೈ ಆದರೆ, 4 ಮ್ಯಾಚ್ಗಳು ರದ್ದಾಗಿದೆ. ಅಂದರೆ ಇಲ್ಲಿ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು.
ಇನ್ನು ಏಕದಿನ ವಿಶ್ವಕಪ್ನಲ್ಲಿ ಉಭಯ ತಂಡಗಳು 10 ಪಂದ್ಯಗಳಲ್ಲಿ ಎದುರು ಬದುರಾಗಿದ್ದು, ಈ ವೇಳೆ ತಲಾ 5 ಪಂದ್ಯಗಳಲ್ಲಿ ಎರಡೂ ತಂಡಗಳು ಜಯ ಸಾಧಿಸಿದೆ. ಇಲ್ಲೂ ಕೂಡ ಸಮಬಲವನ್ನು ಹೊಂದಿದೆ. ಇದಾಗ್ಯೂ ಈ ವರ್ಷ ಉಭಯ ತಂಡಗಳು ಇಂಗ್ಲೆಂಡ್ನಲ್ಲಿ 4 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಇಂಗ್ಲೆಂಡ್ 3 ರಲ್ಲಿ ಗೆದ್ದರೆ, ನ್ಯೂಝಿಲೆಂಡ್ 1 ಪಂದ್ಯ ಜಯಿಸಿದೆ. ಆದರೆ ಈ ಬಾರಿ ಉಭಯ ತಂಡಗಳು ತಟಸ್ಥ ಸ್ಥಳದಲ್ಲಿ ಆಡುತ್ತಿರುವುದು ವಿಶೇಷ.
ಈ ಬಾರಿ ಉಭಯ ತಂಡಗಳು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದೆ. ಈ ಮೈದಾನದಲ್ಲಿ ಇಂಗ್ಲೆಂಡ್ 2 ಪಂದ್ಯಗಳನ್ನಾಡಿದೆ. ಇದರಲ್ಲಿ ಗೆದ್ದಿರುವುದು 1 ಮ್ಯಾಚ್ ಮಾತ್ರ.
ಇನ್ನು ಇದೇ ಮೈದಾನದಲ್ಲಿ ನ್ಯೂಝಿಲೆಂಡ್ ಆಡಿದ 2 ಪಂದ್ಯಗಳನ್ನೂ ಕೂಡ ಗೆದ್ದುಕೊಂಡಿದೆ. ಹೀಗಾಗಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ.
ಇಲ್ಲಿ ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿರುವುದು ಸ್ಪಷ್ಟ. ಇದಾಗ್ಯೂ ನ್ಯೂಝಿಲೆಂಡ್ ತಂಡ ಕಳೆದ ಬಾರಿಯ ಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಇತ್ತ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟದೊಂದಿಗೆ ಶುಭಾರಂಭ ಮಾಡುವ ಇರಾದೆಯಲ್ಲಿದೆ. ಹೀಗಾಗಿ ಮೊದಲ ಪಂದ್ಯದಲ್ಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.